ADVERTISEMENT

ದೇಶದ ಮೊದಲ ಸೈಬರ್‌ ಕಮಾಂಡ್‌ ಘಟಕ ರಚನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 16:42 IST
Last Updated 10 ಸೆಪ್ಟೆಂಬರ್ 2025, 16:42 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿರುವ ದೇಶದ ಮೊದಲ ಸೈಬರ್ ಕಮಾಂಡ್‌ ಘಟಕವು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತಾಗಬೇಕು’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ನಗರದ ‘ನ್ಯೂಸ್ಪೇಸ್‌ ರೀಸರ್ಚ್‌ ಅಂಡ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ’ಯ ಅಧಿಕೃತ ಪ್ರತಿನಿಧಿ ಭಾವನಾ ವಿಜಯಕುಮಾರ್ ಸಲ್ಲಿಸಿದ್ದ ರಿಟ್‌ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಪ್ರಕರಣದಲ್ಲಿ ಇಂತಹದೊಂದು ಸ್ವತಂತ್ರ ಘಟಕವನ್ನು ಸ್ಥಾಪಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.

ಈ ಆದೇಶದ ಅನುಪಾಲನೆಯನ್ನು ಪರಿಗಣಿಸಿ ಬುಧವಾರ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಅವರನ್ನು ತೆರೆದ ಕೋರ್ಟ್‌ ಹಾಲ್‌ಗೆ ಬರಮಾಡಿಕೊಂಡ ನ್ಯಾಯಪೀಠ, ಸೈಬರ್ ಕಮಾಂಡ್‌ ಘಟಕ ಅಥವಾ ಸೈಬರ್ ಕಮಾಂಡ್‌ ಸೆಂಟರ್‌ (ಸಿಸಿಸಿ) ರಚನೆಯ ಆದೇಶ ಕೇವಲ ಕಾಗದದಲ್ಲಿ ಉಳಿಯುವಂತಾಗಬಾರದು. ಈ ಸಂಸ್ಥೆ ಅಥವಾ ಕೇಂದ್ರವು ದೇಶದ ಮೊದಲ ಸೈಬರ್‌ ಕಮಾಂಡ್‌ ಘಟಕ (ಸಿಸಿಯು) ಅಥವಾ ಸಿಸಿಸಿ ಎಂಬ ಹೆಗ್ಗಳಿಕೆ ಎಂಬುದನ್ನು ಮರೆಯಬೇಡಿ’ ಎಂದು ಸೂಚಿಸಿತು.

ADVERTISEMENT

‘ಸೈಬರ್ ಅಪರಾಧಗಳನ್ನು ಎದುರಿಸಲು ಮತ್ತು ಸೈಬರ್ ಭದ್ರತೆಯನ್ನು ಬಲಪಡಿಸಲು ಸ್ಥಾಪಿಸಿರುವ ಸದರಿ ಘಟಕವು, ಹೊಸ ಯುಗದ ತನಿಖಾ ಕೇಂದ್ರಗಳೊಂದಿಗೆ ಹೊಸ ನಮೂನೆಯ ತಾಂತ್ರಿಕ ಯುಗದ ಅಪರಾಧಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕಬೇಕು. ಈ ಘಟಕದ ಅಧಿಕಾರಿಗಳು ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು. ಆಗ ಮಾತ್ರ ರಾಜ್ಯವು ಸೈಬರ್ ಅಪರಾಧದಿಂದ ಹೊರಹೊಮ್ಮುತ್ತಿರುವ ಅಪಸವ್ಯಗಳನ್ನು ನಿಯಂತ್ರಿಸಲು ಸಾಧ್ಯ. ಇಲ್ಲದೇ ಹೋದರೆ ಸೈಬರ್ ಅಪರಾಧ ಅಥವಾ ಸೈಬರ್ ವಂಚನೆಗಳಿಗೆ ಬಲಿಯಾದ ನಾಗರಿಕರಿಗೆ ಎಂದಿಗೂ ನ್ಯಾಯ ಸಿಗುವುದಿಲ್ಲ’ ಎಂದು ನ್ಯಾಯಪೀಠ ಎಚ್ಚರಿಸಿದೆ.

‘ಸಿಸಿಸಿ ಅಥವಾ ಸೈಬರ್ ಕಮಾಂಡೊ ಘಟಕ ಕೇವಲ ಅಧಿಕಾರಶಾಹಿಯ ಕಟ್ಟಡವಾಗಿರಬಾರದು. ಬದಲಾಗಿ ಒಂದು ಮಾದರಿ ಬದಲಾವಣೆ ಎನಿಸಬೇಕು. ಸೈಬರ್ ಅಪರಾಧದ ವಿರುದ್ಧದ ಹೋರಾಟದಲ್ಲಿ ಹೊಸ ಉದಯವನ್ನು ಸೂಚಿಸುವ ದಾರಿದೀಪವಾಗಿರಬೇಕು’ ಎಂದು ಸ್ಪಷ್ಟಪಡಿಸಿದೆ. ‘ನ್ಯಾಯಾಲಯ ನೀಡಿರುವ ಈ ಆದೇಶದ ಅನುಪಾಲನೆ ಕುರಿತಂತೆ ಕೈಗೊಳ್ಳಲಾಗುವ ಕ್ರಮಗಳನ್ನು ಇದೇ 24ಕ್ಕೆ ವಿವರಿಸಿ’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು. 

ಈ ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿಯಾಗಿ ಕಾರ್ಯ ನಿರ್ವಹಿಸಿದ್ದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್.ಜಗದೀಶ್‌ ಅವರು ನೀಡಿದ್ದ ಸಲಹೆಗಳನ್ನು ನ್ಯಾಯಪೀಠ ಸ್ವೀಕರಿಸಿದೆ. ಅಂತೆಯೇ, ಇದೇ ವೇಳೆ, ಮತ್ತೊಂದು ಸಮನ್ವಯ ನ್ಯಾಯಪೀಠದಲ್ಲಿ ಡಿಜಿಟಲ್‌ ಅಪರಾಧಗಳು ಅದರಲ್ಲೂ ಹಣಕಾಸಿನ ವಂಚನೆಯ ಸೈಬರ್ ಅಪರಾಧ ಪ್ರಕರಣಗಳಲ್ಲಿ ನಿಷ್ಕ್ರಿಯಗೊಂಡಿರುವ ಬ್ಯಾಂಕ್‌ ಖಾತೆಗಳ ಕುರಿತಾದ ಅರ್ಜಿಗಳ ವಿಚಾರಣೆ ನಡೆಯುತ್ತಿರುವುದನ್ನು ಮತ್ತು ಈ ಪ್ರಕರಣಗಳಲ್ಲಿ ಅಮಿಕಸ್ ಕ್ಯೂರಿಯಾಗಿರುವ ಪಿ.ಪ್ರಸನ್ನ ಕುಮಾರ್, ನ್ಯಾಯಮೂರ್ತಿ ನಾಗಪ್ರಸನ್ನ ಅವರ ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಸಮನ್ವಯ ನ್ಯಾಯಪೀಠದಲ್ಲಿನ ಅರ್ಜಿಗಳ ಕುರಿತಾದ ಆದೇಶದ ವಿವರ ಸಲ್ಲಿಸಿ’ ಎಂದು ಪ್ರಸನ್ನ ಕುಮಾರ್ ಅವರಿಗೆ ಸೂಚಿಸಿತು.

ಒಂದೇ ಸೂರಿನಡಿ ಬರಲಿ...

ಸೈಬರ್ ಅಪರಾಧಗಳ ತನಿಖೆಯಲ್ಲಿನ ಪ್ರಗತಿ ಅಥವಾ ಎಲ್ಲಾ ಮಾಹಿತಿ ಮತ್ತು ತಂತ್ರಜ್ಞಾನ ಪ್ರಕರಣಗಳನ್ನು ಒಂದೇ ಸೂರಿನಡಿ ತರಬೇಕು. ಸಿಸಿಸಿಯ ಇಂತಹ ಏಕೀಕರಣವನ್ನು ತೋರಿಸುವ ನಿಮ್ಮ ವರದಿಯನ್ನು ಅಮಿಕಸ್ ಕ್ಯೂರಿ ಮೂಲಕ ಈ ನ್ಯಾಯಪೀಠಕ್ಕೆ ಸಲ್ಲಿಸಬೇಕು. ಕೇಂದ್ರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಕೇಂದ್ರದ ಪಾರದರ್ಶಕತೆಗಾಗಿ  ಕ್ರಮ ತೆಗೆದುಕೊಳ್ಳುವುದು ಸಿಸಿಸಿಯ ಆದ್ಯ ಕರ್ತವ್ಯವಾಗಿರುತ್ತದೆ.

ಸಿಸಿಸಿ ಅಧಿಕಾರಿಗಳ ವರ್ಗಾವಣೆ ಬೇಡ

‘ಸಿಸಿಯು ಅಥವಾ ಸಿಸಿಸಿ ಅಡಿಯಲ್ಲಿ ತರಲಾಗುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಸರಿಯಲ್ಲ. ಈ ಘಟಕದ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕರನ್ನು ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ ವರ್ಗಾವಣೆ ಮಾಡಬಾರದು. ಇದರ ಮುಖ್ಯಸ್ಥ ಮತ್ತು ಅವರ ತಂಡವನ್ನು ಪೂರ್ವಾಪರ ಸಮಾಲೋಚನೆಯಿಲ್ಲದೆ ರಾತ್ರೋರಾತ್ರಿ ಸ್ಥಾನದಿಂದ ಕೆಳಗಿಳಿಸಬಾರದು. ಸಿಸಿಯು ನಡೆಸುತ್ತಿರುವ ಯಾವುದೇ ತನಿಖೆಯು ಸಿಸಿಯು ಅಧಿಕಾರಿಗಳ ಪುನರಾವರ್ತಿತ ಬದಲಾವಣೆಯಿಂದ ಅಡಚಣೆ ಎದುರಿಸಬಾರದು’ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.