ADVERTISEMENT

ಚಾಲಕರ ಬೇಡಿಕೆ ಬಹುತೇಕ ಈಡೇರಿಕೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಮುಖ್ಯಮಂತ್ರಿ ಕರೆದಿದ್ದ ಸಭೆಗೆ ಚಾಲಕರು, ಮಾಲೀಕರು ಬಂದಿಲ್ಲ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 16:08 IST
Last Updated 6 ಸೆಪ್ಟೆಂಬರ್ 2023, 16:08 IST
ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ   

ಬೆಂಗಳೂರು: ‘ಸಾರಿಗೆ ಒಕ್ಕೂಟ ಹಾಗೂ ಇತರೆ ಸರಕು ಸಾಗಣೆ, ಆಟೊ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್‌, ಖಾಸಗಿ ಬಸ್‌ಗಳ ಮಾಲೀಕರು/ ಚಾಲಕರ ಬೇಡಿಕೆಗಳನ್ನು ಬಹುತೇಕ ಈಡೇರಿಸಲಾಗಿದೆ. ಹಣಕಾಸು ಇಲಾಖೆಗೆ ಸಂಬಂಧಿಸಿದ ಬೇಡಿಕೆಗಳನ್ನು ಮುಖ್ಯಮಂತ್ರಿಯವರ ಜತೆ ಚರ್ಚಿಸಲು ಅವರೇ ಬಂದಿಲ್ಲ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಆಟೊ ಚಾಲಕರಿಗೆ ತಿಂಗಳ ಪರಿಹಾರ, ವಾಹನಗಳ ಜೀವಾವಧಿ ತೆರಿಗೆಯನ್ನು ಕಂತಿನಲ್ಲಿ ಪಾವತಿಸುವುದು, ಶಕ್ತಿ ಯೋಜನೆಯಿಂದ ಕೆಎಸ್‌ಆರ್‌ಟಿಸಿಗೆ ಸರ್ಕಾರ ನೀಡುತ್ತಿರುವ ರೀತಿಯಲ್ಲಿ ಖಾಸಗಿ ವಾಹನಗಳಿಗೆ ಮರುಪಾವತಿ ಅಥವಾ ರಸ್ತೆ ತೆರಿಗೆ ಸಂಪೂರ್ಣ ರದ್ದು, ರಸ್ತೆ ತೆರಿಗೆ ಕಡಿತಗೊಳಿಸುವ ಬೇಡಿಕೆಗಳ ಬಗ್ಗೆ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧಾರ ಕೈಗೊಳ್ಳಬೇಕು. ಅವರು ಕರೆದಿದ್ದ ಸಭೆಗೆ ಬಾರದೆ ಒಕ್ಕೂಟ ಸದಸ್ಯರು ಇದೀಗ ಮುಷ್ಕರ ಮಾಡುತ್ತೇವೆ ಎನ್ನುತ್ತಿದ್ದಾರೆ’ ಎಂದು ದೂರಿದರು.

‘ಸಾರಿಗೆ ಇಲಾಖೆಯ ಸಾರಥಿ ದತ್ತಾಂಶದಲ್ಲಿ 3.64 ಲಕ್ಷ ಚಾಲಕರಿದ್ದಾರೆ. ಇವರಿಗೆ ಪ್ರತಿ ತಿಂಗಳು ₹10 ಸಾವಿರ ಪರಿಹಾರ ನೀಡಲು ₹4,370 ಕೋಟಿ ಬೇಕಾಗುತ್ತದೆ. ಇದನ್ನು ಮುಖ್ಯಮಂತ್ರಿಯವರು ನಿರ್ಧರಿಸಬೇಕು. ಒಕ್ಕೂಟ ಮಾಡಿಕೊಂಡಿರುವವರು 10 ಜನರನ್ನು ಸಭೆಗೆ ಕಳುಹಿಸಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಬೇಕಿತ್ತು. ಆಗ ಬರಲಿಲ್ಲ, ಇದೀಗ ಸರ್ಕಾರ ಅವರ ಬಳಿ ಬರಬೇಕು ಎನ್ನುವುದು ಸರಿಯಲ್ಲ’ ಎಂದು ಹೇಳಿದರು.

ADVERTISEMENT

ಅಸಂಘಟಿತ ವಾಣಿಜ್ಯ ಚಾಲಕರು ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆಯಾಗಲಿದೆ. ಪ್ರಯಾಣಿಕರಿಗೆ, ಚಾಲಕರಿಗೆ ಅನುಕೂಲ ಮಾಡಿಕೊಡಲು ಇ–ಆಡಳಿತದಿಂದ ಮೂರ್ನಾಲ್ಕು ತಿಂಗಳಲ್ಲಿ ಆ್ಯಪ್‌ ಅಭಿವೃದ್ಧಿಯಾಗಲಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್‌ ತೆರೆಯಲಾಗುವುದು. ಚಾಲಕರಿಗೆ ಜಾತಿವಾರು ನಿಗಮಗಳಲ್ಲಿ ₹2 ಲಕ್ಷ ಸಾಲ ನೀಡುವ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಚಾಲಕರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ವಸತಿ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ, ಕಾರು ಖರೀದಿಗೆ ಸಬ್ಸಿಡಿ ನೀಡಲು ನಿಗಮ ಮಂಡಳಿಗಳಲ್ಲಿ ಯೋಜನೆ ಜಾರಿಯಲ್ಲಿದೆ. ಚಾಲಕ ಮಕ್ಕಳಿಗೆ ‘ವಿದ್ಯಾನಿಧಿ’ ಯೋಜನೆ ಹಾಗೂ ಆರೋಗ್ಯ ಸೌಲಭ್ಯಕ್ಕೆ ವಿಶೇಷ ಯೋಜನೆ ಆನ್‌ಲೈನ್‌ ‘ಸೇವಾಸಿಂಧು‘ ಮೂಲಕ ಪ್ರಾರಂಭಿಸಲಾಗಿದೆ. 2023ರ ಮಾರ್ಚ್‌ 30ರ ಅಂತ್ಯಕ್ಕೆ 6,991 ಬ್ಯಾಂಕ್‌ ಖಾತೆಗಳಿಗೆ ₹4.07 ಕೋಟಿ ಪಾವತಿಸಲಾಗಿದೆ. 2023–24ನೇ ಸಾಲಿಗೆ ₹17 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ವಿವರಿಸಿದರು.

ಎಲೆಕ್ಟ್ರಿಕ್‌ ವಾಹನಗಳಿಗೆ ರಹದಾರಿ (ಪರ್ಮಿಟ್‌) ನೀಡುವುದು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದ್ದು, ಈ ಬಗ್ಗೆ ಪತ್ರ ಬರೆಯಲಾಗಿದೆ. ಹೊರ ರಾಜ್ಯಗಳಿಗೆ ವಿಶೇಷ ರಹದಾರಿ ಪಡೆದುಕೊಳ್ಳಲು ಗಡಿಭಾಗಗಳಲ್ಲಿ ತನಿಖಾ ಠಾಣೆ ವ್ಯವಸ್ಥೆ ಮಾಡಲಾಗಿದೆ. 30 ದಿನಗಳಲ್ಲಿ ಆನ್‌ಲೈನ್‌ ಮೂಲಕ ರಹದಾರಿ ನೀಡಲಾಗುತ್ತದೆ ಎಂದರು.

ರಾಪಿಡೊ ಬೈಕ್‌ ಟ್ಯಾಕ್ಸ್ ನಿಷೇಧ, ಓಲಾ ಮತ್ತು ಉಬರ್‌, ರೆಡ್ ಬಸ್‌ ಕಮಿಷನ್‌ ವಿಷಯ ನ್ಯಾಯಾಲಯದಲ್ಲಿದೆ. ಅಲ್ಲಿನ ತೀರ್ಪಿನಂತೆ ಮುಂದುವರಿಯಲಾಗುವುದು ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಜೊಮ್ಯಾಟೊ, ಸ್ವಿಗ್ಗಿ ಆ್ಯಪ್‌ ಆಧಾರಿತ ಅನಧಿಕೃತ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಲೈಸೆನ್ಸ್‌ ಪಡೆಯದೆ ಪೋರ್ಟರ್‌ ಸಂಸ್ಥೆ ಸರಕು ಸಾಗಣೆ ವಾಹನಗಳ ಆಚರಣೆ ಮಾಡುತ್ತಿದ್ದು, 2 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಾಗರಿಕರಿಗೆ ತೊಂದರೆ ಇಲ್ಲ!

‘ಸೆ.11ರಂದು ಖಾಸಗಿ ವಾಹನಗಳ ಮಾಲೀಕರು ಯಾವುದೇ ರೀತಿಯ ಮುಷ್ಕರ ಮಾಡಿದರೂ ಅದರಿಂದ ನಾಗರಿಕರಿಗೆ ತೊಂದರೆಯಾಗದಂತೆ ಎಲ್ಲ ರೀತಿಯ ಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ’ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ‘ವೈಯಕ್ತಿಕವಾಗಿ ನಾನು ಆಟೊ ಟ್ಯಾಕ್ಸ್ ಚಾಲಕರೊಂದಿಗಿದ್ದೇವೆ. ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಅವರು ಯಾವಾಗ ಬೇಕಾದರೂ ನಮ್ಮೊಂದಿಗೆ ಮಾತುಕತೆ ನಡೆಸಬಹುದು. ನಮ್ಮ ಕಚೇರಿ 24 ಗಂಟೆಯೂ ತೆರೆದಿರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.