ADVERTISEMENT

ಮೊದಲ ದಿನ ಯಶಸ್ವಿಯಾಗಿ ಕೊನೆಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 10:39 IST
Last Updated 25 ಜೂನ್ 2020, 10:39 IST
ಬೆಂಗಳೂರಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಹೊರಬಂದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಹೊರಬಂದ ವಿದ್ಯಾರ್ಥಿಗಳು   

ಬೆಂಗಳೂರು: ಬಹು ನಿರೀಕ್ಷೆಯ ಎಸ್ಸೆಸ್ಸೆಲ್ಸಿ ಮೊದಲ ದಿನದ ಪರೀಕ್ಷೆ ಗುರುವಾರ ಯಶಸ್ವಿಯಾಗಿ ಕೊನೆಗೊಂಡಿದ್ದು, ಎಷ್ಟು ಮಂದಿ ಗೈರುಹಾಜರಾಗಿದ್ದಾರೆ ಎಂಬ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆದಿದೆ.

ಮುಖಗವಸು ತೊಟ್ಟು ಬೆಳಿಗ್ಗೆ 8 ಗಂಟೆಯಿಂದಲೇ ಪರೀಕ್ಷಾ ಕೇಂದ್ರಕ್ಕೆ ಬರಲು ಆರಂಭಿಸಿದ್ದ ವಿದ್ಯಾರ್ಥಿಗಳು ಬಹುತೇಕ ಕಡೆ ಅಂತರ ಕಾಯ್ದುಕೊಂಡು ತಮ್ಮ ಶಿಸ್ತನ್ನು ತೋರಿಸಿದರು. ಧ್ವನಿವರ್ಧಕದಲ್ಲಿ ಮಕ್ಕಳಿಗೆ ಎಚ್ಚರಿಸುವ ಕೆಲಸ ಬಹುತೇಕ ಎಲ್ಲೆಡೆ ನಡೆಯಿತು. ನೋಂದಣಿ ಸಂಖ್ಯೆಯನ್ನು ಹುಡುಕುವಲ್ಲಿ ಜಂಗುಳಿ ತಪ್ಪಿಸಲಿಕ್ಕಾಗಿ ಹಲವೆಡೆ ಸೂಚನಾ ಫಲಕಗಳನ್ನು ಅಳವಡಿಸಲಾಗಿತ್ತು.

ದ್ವಿತೀಯ ಪಿಯು ಇಂಗ್ಲಿಷ್‌ ಪರೀಕ್ಷೆ ವೇಳೆ ಹಲವು ಪ‍ರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಗುಂಪುಗೂಡಿದ್ದರಿಂದ ಆತಂಕ ನೆಲೆಸಿತ್ತು. ಅದೇ ತಪ್ಪನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಮಾಡಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಫಲ ಕೊಟ್ಟಿತು.

ADVERTISEMENT

ಗುರುವಾರ ದ್ವಿತೀಯ ಭಾಷೆ ಕನ್ನಡ/ ಇಂಗ್ಲಿಷ್‌ ಪರೀಕ್ಷೆ ನಡೆದಿದ್ದರೆ, ಶುಕ್ರವಾರ ಕೋರ್‌ ವಿಷಯಗಳಾದ ಎಲಿಮೆಂಟ್ಸ್ ಆಫ್‌ ಮೆಕ್ಯಾನಿಕಲ್‌ ಆ್ಯಂಡ್‌ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್ –2, ಎಂಜಿನಿಯರಿಂಗ್‌ ಗ್ರಾಫಿಕ್ಸ್‌–2, ಎಲಿಮೆಂಟ್ಸ್ ಆಫ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌, ಎಲಿಮೆಂಟ್ಸ್ ಆಫ್‌ ಕಂಪ್ಯೂಟರ್‌ ಸೈನ್ಸ್ ಹಾಗೂ ಅರ್ಥಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ.

ವಿದ್ಯಾರ್ಥಿಗಳಲ್ಲಿ ಸಂತಸ: ಪರೀಕ್ಷೆ ಬರೆದು ಹೊರಬಂದ ಹಲವು ವಿದ್ಯಾರ್ಥಿಗಳು ಮೊದಲ ದಿನದ ಯುದ್ಧ ಗೆದ್ದ ಸಂಭ್ರಮದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.