ADVERTISEMENT

ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚುವರಿ ಅನುದಾನ ನೀಡಲಿ: ಮಹಾನಗರ ಪಾಲಿಕೆ ನೌಕರರ ಸಂಘ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 14:49 IST
Last Updated 5 ಏಪ್ರಿಲ್ 2025, 14:49 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ‘ಎಲ್ಲ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ನೀಡಬೇಕಿರುವ ಪರಿಷ್ಕೃತ ವೇತನದ ಹೆಚ್ಚುವರಿ ಅನುದಾನವನ್ನು ಸರ್ಕಾರವೇ ಬಿಡುಗಡೆ ಮಾಡಬೇಕು’ ಎಂದು ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಆಗ್ರಹಿಸಿದೆ.

‘7ನೇ ವೇತನ ಆಯೋಗದ ಪರಿಷ್ಕೃತ ವೇತನದ ಹೆಚ್ಚುವರಿ ಅನುದಾನ ಹಾಗೂ 2023ರ ಏಪ್ರಿಲ್‌ನಿಂದ 2024ರ ಜುಲೈವರೆಗೆ ಪಾವತಿಸಬೇಕಿದ್ದ ಮಧ್ಯಂತರ ಪರಿಹಾರವನ್ನೂ ಸ್ಥಳೀಯ ಸಂಸ್ಥೆಗಳು ಸ್ವಂತ ಸಂಪನ್ಮೂಲಗಳಿಂದಲೇ ಭರಿಸುವಂತೆ ಹಣಕಾಸು ಇಲಾಖೆ ಸುತ್ತೋಲೆ ಹೊರಡಿಸಿದೆ. ಬಹುತೇಕ ಸ್ಥಳೀಯ ಸಂಸ್ಥೆಗಳ ಆರ್ಥಿಕ ಪ‍ರಿಸ್ಥಿತಿ ಉತ್ತಮವಾಗಿಲ್ಲ. ಆದ್ದರಿಂದ ಸರ್ಕಾರವೇ ಅನುದಾನ ನೀಡಬೇಕು’ ಎಂದು ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್‌ ಒತ್ತಾಯಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅಮೃತ್‌ರಾಜ್‌, ‘ಸ್ಥಳಿಯ ಸಂಸ್ಥೆಗಳಿಗೆ ರಾಜ್ಯ ಹಣಕಾಸು ಆಯೋಗದ (ಎಸ್​ಎಫ್​​ಸಿ) ಅನುದಾನದಲ್ಲಿಯೂ ಗಣನೀಯ ಇಳಿಕೆಯಾಗಿದೆ. ಘನತ್ಯಾಜ್ಯ, ಉದ್ಯಾನ ನಿರ್ವಹಣೆ, ಹೊರಗುತ್ತಿಗೆ ಸೇರಿ ಇತ್ಯಾದಿ ಮೂಲ ಸೌಕರ್ಯಗಳ ವೆಚ್ಚವೂ ಹೆಚ್ಚಾಗಿದೆ. ಸ್ವಂತ ಮೂಲದಿಂದ ಸಂಗ್ರಹವಾಗುವ ಸಂಪನ್ಮೂಲಗಳಿಂದ ಸಾಮಾನ್ಯ ವೆಚ್ಚಗಳನ್ನೂ ಭರಿಸಲು ಪರದಾಡುವ ಸ್ಥಿತಿ ಇದೆ. ಹೀಗಾಗಿ, ಹಣಕಾಸು ಇಲಾಖೆಯ ಸುತ್ತೋಲೆ ಹಿಂಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.

‘ಪರಿಷ್ಕೃತ ವೇತನ ಜಾರಿಗೆ ತರಲು ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಸಂಘ ಖಂಡಿಸುತ್ತದೆ. ಶೀಘ್ರವೇ ಪರಿಹಾರ ಕಲ್ಪಿಸದಿದ್ದರೆ, ಎಲ್ಲ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿಯ ನೌಕರರ ಸಂಘಟನೆಗಳ ಸದಸ್ಯರು ಏಪ್ರಿಲ್‌ 10ರಂದು ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.