ADVERTISEMENT

ರಾಬಿನ್‌ ಉತ್ತಪ್ಪ ವಿರುದ್ಧದ ವಾರಂಟ್‌ಗೆ ಹೈಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2024, 14:34 IST
Last Updated 31 ಡಿಸೆಂಬರ್ 2024, 14:34 IST
<div class="paragraphs"><p>ರಾಬಿನ್‌ ಉತ್ತಪ್ಪ</p></div>

ರಾಬಿನ್‌ ಉತ್ತಪ್ಪ

   

ಬೆಂಗಳೂರು: ‘ಸಹ ಪಾಲುದಾರರಾಗಿರುವ ಕಂಪನಿಯಲ್ಲಿನ ಉದ್ಯೋಗಿಗಳಿಗೆ, ಉದ್ಯೋಗ ಭವಿಷ್ಯ ನಿಧಿ (ಇಪಿಎಫ್‌) ಹಣ ಪಾವತಿ ಮಾಡದೆ ವಂಚಿಸಿದ್ದಾರೆ’ ಎಂಬ ಆರೋಪದಡಿ ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಐಯುಡ ವಿರುದ್ಧ ಹೊರಡಿಸಲಾಗಿದ್ದ ವಾರಂಟ್‌ಗೆ ಹೈಕೋರ್ಟ್ ತಡೆ ನೀಡಿದೆ.

ಈ ಸಂಬಂಧ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಹೊರಡಿಸಿರುವ ವಸೂಲಿ ನೋಟಿಸ್ ಮತ್ತು ಬಂಧನದ ವಾರಂಟ್ ಪ್ರಶ್ನಿಸಿ ರಾಬಿನ್ ಉತ್ತಪ್ಪ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ರಾಬಿನ್‌ ಉತ್ತಪ್ಪ ಪರ ವಾದ ಮಂಡಿಸಿದ ಪದಾಂಕಿತ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ, ‘ರಾಬಿನ್‌ ಉತ್ತಪ್ಪ ಅವರು, ಸೆಂಟಾರಸ್‌ ಲೈಫ್‌ ಸ್ಟೈಲ್‌ ಬ್ರ್ಯಾಂಡ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಸಹ ಪಾಲುದಾರರಾಗಿದ್ದರು. ಆದರೆ, 2020ರಲ್ಲಿಯೇ ಅವರು ತಮ್ಮ ಪಾಲುದಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದ್ದರಿಂದ, ಅವರನ್ನು ಪ್ರಕರಣದಲ್ಲಿ ಭಾಗಿಯನ್ನಾಗಿ ಮಾಡಲು ಅವಕಾಶವಿಲ್ಲ. ಹೀಗಾಗಿ, ಅವರ ವಿರುದ್ಧದ ವಸೂಲಿ ನೋಟಿಸ್ ಮತ್ತು ಪುಲಕೇಶಿ ನಗರ ಪೊಲೀಸರು ಹೊರಡಿಸಿರುವ ಬಂಧನದ ವಾರಂಟ್ ಕಾನೂನು ಬಾಹಿರವಾಗಿದ್ದು ಅದನ್ನು ರದ್ದುಪಡಿಸಬೇಕು’ ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಾರಂಟ್‌ಗೆ ತಡೆ ಆದೇಶ ನೀಡಿತಲ್ಲದೆ, ಪ್ರತಿವಾದಿಗಳಾದ ಕೇಂದ್ರ ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ, ನವದೆಹಲಿಯಲ್ಲಿನ ಸಹಾಯಕ ಭವಿಷ್ಯ ನಿಧಿ ಆಯುಕ್ತರು ಮತ್ತು ವಸೂಲಿ ಅಧಿಕಾರಿ, ಬೆಂಗಳೂರಿನ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಮತ್ತು ವಸೂಲಿ ಅಧಿಕಾರಿ ಸೇರಿದಂತೆ ಒಟ್ಟು ಆರು ಜನರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದೆ.

ಪ್ರಕರಣವೇನು?:

ಮೆಸರ್ಸ್‌ ಸೆಂಟಾರಸ್‌ ಲೈಫ್‌ ಸ್ಟೈಲ್‌ ಬ್ರ್ಯಾಂಡ್ ಪ್ರೈವೇಟ್ ಲಿಮಿಟೆಡ್‌ ಕಂಪೆನಿಯಲ್ಲಿ ರಾಬಿನ್‌ ಉತ್ತಪ್ಪ ₹12 ಕೋಟಿ ಹೂಡಿಕೆ ಮಾಡುವ ಮೂಲಕ ಪಾಲುದಾರರಾಗಿದ್ದರು. ಆದರೆ, ಕಂಪನಿ ನಷ್ಟಕ್ಕೆ ಸಿಲುಕಿದೆ ಎಂಬ ಕಾರಣಕ್ಕೆ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಏತನ್ಮಧ್ಯೆ, ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರು, ‘ನಮ್ಮ ಸಂಬಳದಲ್ಲಿ ಇಪಿಎಫ್ ಹಣವನ್ನು ಕಡಿತಗೊಳಿಸಲಾಗಿದೆ ಆದರೆ, ಇಪಿಎಫ್ ಹಣವನ್ನು ಪಾವತಿ ಮಾಡಿಲ್ಲ. ಹಣವನ್ನು ಉದ್ಯೋಗಿಗಳ ಖಾತೆಗೆ ಹಾಕದೇ ಒಟ್ಟು ₹ 23 ಲಕ್ಷ ವಂಚಿಸಲಾಗಿದೆ’ ಎಂದು ಆರೋಪಿಸಿದ್ದರು. ಈ ದೂರಿಗೆ ಸಂಬಂಧಿಸಿದಂತೆ ಇಪಿಎಫ್ ಪ್ರಾದೇಶಿಕ ಆಯುಕ್ತರು ಕೋರಿದ್ದ ಕ್ರಮದ ಅನುಸಾರ ಬಂಧನದ ವಾರಂಟ್‌ ಹೊರಡಿಲಾಗಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.