ಬೆಂಗಳೂರು: ಬಳಕೆಯಾಗದೆ ಹರಿದು ಹೋಗುವ ಹೆಚ್ಚುವರಿ ನೀರಿನಲ್ಲಿ ಕರ್ನಾಟಕ ಸರ್ಕಾರ ಈವರೆಗೆ ಪಾಲು ಕೇಳದ ಕಾರಣ 46 ವರ್ಷಗಳಿಂದ ತಮಿಳುನಾಡಿಗೆ 396 ಟಿಎಂಸಿ ಅಡಿ ನೀರು ಹರಿದು ಹೋಗುತ್ತಿದೆ. ಹೆಚ್ಚುವರಿ ನೀರಿನಲ್ಲಿ ಕರ್ನಾಟಕ ಪಾಲು ಕೇಳಿ ಹಕ್ಕು ಮಂಡಿಸುವಂತೆ ಕರ್ನಾಟಕ ಗಡಿ ಮತ್ತು ನದಿ ರಕ್ಷಣಾ ಆಯೋಗ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.
ಆಯೋಗದ ಅಧ್ಯಕ್ಷ ನ್ಯಾಯ ಮೂರ್ತಿ ಕೆ.ಎಲ್. ಮಂಜುನಾಥ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಈ ಸಲಹೆ ನೀಡಿದ್ದಾರೆ.
ಪ್ರವಾಹ ಸಂದರ್ಭ ಮತ್ತು ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ವರ್ಷಗಳಲ್ಲಿ ನೀರು ಸಂಗ್ರಹ ಸಾಧ್ಯ
ವಾಗದೆ ನದಿಗೆ ಹರಿ ಬಿಡಲಾಗುತ್ತಿದೆ. 1974–75ನೇ ಸಾಲಿನಿಂದ ಈವರೆಗೆ ಬಿಳಿಗುಂಡ್ಲು ಗೇಟ್‌ನಲ್ಲಿ ಹರಿದು ಹೋಗಿರುವ ನೀರಿನ ಪ್ರಮಾಣದ ಅಂಕಿ–ಅಂಶದ ಪಟ್ಟಿ ಗಮನಿಸಿದರೆ ವರ್ಷಕ್ಕೆ ಸರಾಸರಿ 396.201 ಟಿಎಂಸಿ ಅಡಿ ನೀರು ಹರಿದು ಹೋಗಿದೆ ಎಂದು ಅವರು ವಿವರಿಸಿದ್ದಾರೆ.
‘ಕಾವೇರಿ ನದಿ ನೀರು ಹಂಚಿಕೆ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರ್ಷಕ್ಕೆ 177.25 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಕರ್ನಾಟಕ ದಿಂದ ಹರಿಸಬೇಕಾಗಿದೆ. ಎರಡು ಪಟ್ಟಿಗೂ ಹೆಚ್ಚಿನ ನೀರು ತಮಿಳುನಾಡಿಗೆ ಪ್ರತಿವರ್ಷ ಹರಿದು ಹೋಗುತ್ತಿದೆ.
‘ಕರ್ನಾಟಕದಿಂದ ಹೆಚ್ಚುವರಿಯಾಗಿ ನೀರು ಹರಿದು ಬರುತ್ತಿದೆ ಎಂಬುದನ್ನು ತಮಿಳುನಾಡು ಸರ್ಕಾರವೇ ಸ್ವತಃ ಒಪ್ಪಿಕೊಂಡಿದೆ. ಕಾವೇರಿ ನೀರನ್ನು ಸೇಲಂ ಜಿಲ್ಲೆಯ ಎಡಪಾಡಿ, ಒಮಲೂರು, ಸಂಕರಿ, ಮೆಟ್ಟೂರು ಕಡೆಗೆ ತಿರುಗಿಸಲು ಯೋಜನೆಯೊಂದನ್ನು ತಮಿಳುನಾಡು ರೂಪಿಸಿದೆ. ಇದಕ್ಕೆ ಅಲ್ಲಿನ ಕಾವೇರಿ ನೀರು ಬಳಕೆದಾರ ರೈತರ ಸಂಘ ವಿರೋಧ ವ್ಯಕ್ತಪಡಿಸಿ 2020ರಲ್ಲಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿರುವ ತಮಿಳುನಾಡು ಸರ್ಕಾರ, ‘ಕರ್ನಾಟಕದಲ್ಲಿ ನೀರು ಸಂಗ್ರಹ ಸಾಮರ್ಥ್ಯ ಕಡಿಮೆ ಇರುವ ಕಾರಣ ಹೆಚ್ಚುವರಿ ನೀರು ಹರಿದು ಬರುತ್ತಿದೆ. ಅದನ್ನಷ್ಟೇ ಬೇರೆ ಕಡೆಗೆ ತಿರುಗಿಸಲು ಯೋಜನೆ ರೂಪಿಸಲಾಗಿದೆ. ಇಲ್ಲದಿದ್ದರೆ ನೀರು ಸಮುದ್ರಕ್ಕೆ ಪೋಲಾಗಿ ಹರಿದು ಹೋಗಲಿದೆ ಎಂದು ತಿಳಿಸಿದೆ.’
‘ಈ ಅಫಿಡವಿಟ್ ಸಲ್ಲಿಸುವ ಮೂಲಕ ಕರ್ನಾಟಕದಿಂದ ಹೆಚ್ಚುವರಿ ನೀರು ಹರಿದು ಬರುತ್ತಿದೆ ಎಂಬುದನ್ನು ತಮಿಳುನಾಡು ಕೂಡ ಒಪ್ಪಿಕೊಂಡಿದೆ. ಹೀಗಾಗಿ, ಕರ್ನಾಟಕ ಸರ್ಕಾರ ಹೆಚ್ಚುವರಿಯಾಗಿ ಹರಿದು ಹೋಗುವ ನೀರಿನಲ್ಲಿ ಪಾಲು ಕೇಳಿ ಹಕ್ಕು ಮಂಡಿಸಬೇಕು. ಇಲ್ಲದಿದ್ದರೆವೈಗೈ-ಗುಂಡೂರು ನದಿಗಳಿಗೆ ಕಾವೇರಿ ನದಿ ನೀರನ್ನು ಜೋಡಿಸುವ ಯೋಜನೆಯನ್ನು ತಮಿಳುನಾಡು ಸರ್ಕಾರ ಜಾರಿಗೆ ತರಲಿದೆ. ಆ ಮೂಲಕ ನೀರು ಬಳಕೆಯ ಹಕ್ಕನ್ನು ಅವರು ಮುಂದಿನ ದಿನಗಳಲ್ಲಿ ಮಂಡಿಸುವ ಸಾಧ್ಯತೆ ಇದೆ’ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.