ADVERTISEMENT

ವೈದ್ಯ ವೃತ್ತಿಗೆ ತೊಡಕಾದ ಗ್ರಾಮೀಣ ಸೇವೆ ಕಡ್ಡಾಯ ಎಂಬ ನಿಯಮ

ಚಂದ್ರಹಾಸ ಹಿರೇಮಳಲಿ
Published 11 ಜನವರಿ 2026, 0:21 IST
Last Updated 11 ಜನವರಿ 2026, 0:21 IST
   

ಬೆಂಗಳೂರು: ರಾಜ್ಯ ಸರ್ಕಾರ ದಶಕದ ಹಿಂದೆ ಜಾರಿಗೊಳಿಸಿದ್ದ ವೈದ್ಯರ ‘ಗ್ರಾಮೀಣ ಸೇವೆ ಕಡ್ಡಾಯ’ ನಿಯಮವು ವೈದ್ಯಕೀಯ ಪದವೀಧರರು ಕರ್ನಾಟಕ ವೈದ್ಯಕೀಯ ಪರಿಷತ್‌ನ ನೋಂದಣಿಗೆ ಅಡ್ಡಿಯಾಗಿದ್ದು, ವೈದ್ಯ ವೃತ್ತಿ ಆರಂಭಿಸಲು ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ತೊಡಕಾಗಿದೆ.

ಬಹುತೇಕ ವೈದ್ಯರು ಹಿಂದೆ ನಗರ ಪ್ರದೇಶಗಳಲ್ಲೇ ಕೆಲಸ ಮಾಡಲು ಆಸಕ್ತಿ ತೋರುತ್ತಿದ್ದ ಕಾರಣ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಹಂತದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ತೀವ್ರವಾಗಿತ್ತು.

ತಜ್ಞ ವೈದ್ಯರು ಲಭ್ಯವಿಲ್ಲದೆ ಗ್ರಾಮೀಣ ಜನರು ಸಂಕಷ್ಟ ಅನುಭವಿಸಿದ್ದರು. ಹಾಗಾಗಿ, ಗ್ರಾಮೀಣ ಸೇವೆ ಕಡ್ಡಾಯಗೊಳಿಸುವ ಕಾಯ್ದೆಯನ್ನು 2012ರಲ್ಲಿ ಸರ್ಕಾರ ಜಾರಿಗೊಳಿಸಿತ್ತು.

ADVERTISEMENT

ಕಾಯ್ದೆಯ ನಿಯಮಗಳಂತೆ ಸರ್ಕಾರಿ ವೈದ್ಯಕೀಯ ಕೋಟಾದಲ್ಲಿ ಸೀಟು ಪಡೆದು ವೈದ್ಯಕೀಯ ಪದವಿ (ಎಂಬಿಬಿಎಸ್‌) ಮುಗಿಸಿದವರು ಕನಿಷ್ಠ ಒಂದು ವರ್ಷ ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಬೇಕು. ಆ ನಂತರವೇ ಅಂತಹ ವಿದ್ಯಾರ್ಥಿಗಳು ಕರ್ನಾಟಕ ವೈದ್ಯಕೀಯ ಪರಿಷತ್‌ನಲ್ಲಿ (ಕೆಎಂಸಿ) ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಪ್ರಮಾಣಪತ್ರ ಸಿಗದೆ ರೋಗಿಗಳನ್ನು ಪರೀಕ್ಷಿಸಲು, ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು, ಕ್ಲಿನಿಕ್‌, ನರ್ಸಿಂಗ್‌ ಹೋಂ ತೆರೆಯಲು ಹಾಗೂ ವೈದ್ಯಕೀಯ ಸೇವೆಗಾಗಿ ಹೊರದೇಶಗಳಿಗೆ ತೆರಳಲೂ ಸಾಧ್ಯವಾಗದು.

ಅಂದು ಸಾಕಷ್ಟು ಸಂಖ್ಯೆಯಲ್ಲಿ ವೈದ್ಯರ ಹುದ್ದೆಗಳು ಖಾಲಿ ಇದ್ದ ಕಾರಣ ಕಾಯ್ದೆಯ ನಿಯಮಗಳು ಆಶಾದಾಯಕವಾಗಿಯೇ ಕಾಣಿಸಿದ್ದವು. ದಶಕದ ನಂತರ ಪರಿಸ್ಥಿತಿ ಬದಲಾಗಿದ್ದು, ಸಾಕಷ್ಟು ವೈದ್ಯರನ್ನು ನೇಮಕ ಮಾಡಲಾಗಿದೆ. ಮತ್ತೊಂದು ಕಡೆ ಸರ್ಕಾರಿ ವೈದ್ಯಕೀಯ ಕಾಲೇಜುಗಳು, ಸರ್ಕಾರಿ ಕೋಟಾದ ಸೀಟುಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ಪ್ರತಿ ವರ್ಷ ಸಾಕಷ್ಟು ವಿದ್ಯಾರ್ಥಿಗಳು ಕೋರ್ಸ್‌ ಮುಗಿಸಿ ಹೊರಬರುತ್ತಿದ್ದಾರೆ. ನೇಮಕಾತಿ ಪ್ರಕ್ರಿಯೆಯೂ ಕಡಿಮೆಯಾಗಿದ್ದು, ಹಲವರಿಗೆ ಗ್ರಾಮೀಣ ಸೇವೆಯ ಅವಕಾಶವೇ ಸಿಗುತ್ತಿಲ್ಲ. ಹೀಗಾಗಿ, ಕೆಎಂಸಿ ನೋಂದಣಿ ಸಾಧ್ಯವಾಗದೆ ಪರದಾಡುತ್ತಿದ್ದಾರೆ.  

‘ಕೋವಿಡ್‌ ನಂತರ 1,048 ಸಾಮಾನ್ಯ ವೈದ್ಯರು, 743 ತಜ್ಞ ವೈದ್ಯರು, 88 ದಂತ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿತ್ತು. 2022–23ನೇ ಸಾಲಿನಲ್ಲಿ ಒಂದು ವರ್ಷದ ಕಡ್ಡಾಯ ಗ್ರಾಮೀಣ ಸೇವೆಯ ಅಡಿ 3,221 ವೈದ್ಯರ ಸೇವೆಯನ್ನು ಬಳಸಿಕೊಳ್ಳಲಾಗಿತ್ತು. ನಂತರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಸರ್ಕಾರಿ ಕೋಟಾದ ವೈದ್ಯಕೀಯ ಸೀಟುಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಇದರಿಂದ ಪದವಿ ಮುಗಿಸುವ ಎಲ್ಲರಿಗೂ ಗ್ರಾಮೀಣ ಸೇವೆಯ ಅವಕಾಶ ಸಿಗುತ್ತಿಲ್ಲ. ಕೆಎಂಸಿ ನೋಂದಣಿ ಇಲ್ಲದೆ ಖಾಸಗಿ ಆಸ್ಪತ್ರೆ ಸೇರಿದಂತೆ ಬೇರೆ ಕಡೆ ಕೆಲಸಕ್ಕೆ ಸೇರಲೂ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಎಂಬಿಬಿಎಸ್‌ ಪದವೀಧರ ಡಾ.ಕಿರಣ್‌ಕುಮಾರ್. 

ಭವಿಷ್ಯದಲ್ಲಿ ಗ್ರಾಮೀಣ ಸೇವೆ ಮಾಡುವ ಷರತ್ತಿಗೆ ಒಳಪಟ್ಟು ಎಂಬಿಬಿಎಸ್‌ ಪದವೀಧರರಿಗೆ ನೋಂದಣಿ ಮಾಡಿಕೊಳ್ಳಲು ಸರ್ಕಾರ ಸಮ್ಮತಿಸಿದೆ. ವಾರದ ಒಳಗೆ ಅಧಿಕೃತ ಆದೇಶ ಬರುವ ನಿರೀಕ್ಷೆ ಇದೆ
-ಡಾ.ವೈ.ಸಿ.ಯೋಗಾನಂದ ರೆಡ್ಡಿ ಅಧ್ಯಕ್ಷ ಕೆಎಂಸಿ
ಎರಡು ವರ್ಷಗಳ ಹಿಂದೆ ಎಂಬಿಬಿಎಸ್‌ ಮುಗಿಸಿದೆ. ಗ್ರಾಮೀಣ ಸೇವೆಯ ಅವಕಾಶ ಸಿಗದ ಕಾರಣ ಕೆಎಂಸಿ ನೋಂದಣಿ ಆಗಿಲ್ಲ. ನೋಂದಣಿ ಇಲ್ಲದೆ ಸ್ನಾತಕೋತ್ತರ ಕೋರ್ಸ್‌ ಪ್ರವೇಶ ಸಾಧ್ಯವಾಗಿಲ್ಲ
-ಡಾ.ರಾಜಶೇಖರ್ ಪಿಜಿ–ನೀಟ್‌ ಆಕಾಂಕ್ಷಿ

ತಾತ್ಕಾಲಿಕ ನೋಂದಣಿಗಿಲ್ಲ ಅವಕಾಶ

ಗ್ರಾಮೀಣ ಸೇವೆ ಕಡ್ಡಾಯದಿಂದ ಕರ್ನಾಟಕ ವೈದ್ಯಕೀಯ ಪರಿಷತ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ತೊಡಕಾಗಿರುವುದನ್ನು ಮನಗೊಂಡ ಸರ್ಕಾರ ತಾತ್ಕಾಲಿಕ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದೆ.  ಭಾರತೀಯ ವೈದ್ಯಕೀಯ ಆಯೋಗ 2019ರಲ್ಲಿ ಜಾರಿಗೊಳಿಸಿದ ನಿಯಮದಂತೆ ಯಾವುದೇ ರಾಜ್ಯಗಳ ವೈದ್ಯಕೀಯ ಪರಿಷತ್‌ನಲ್ಲಿ ತಾತ್ಕಾಲಿಕ ನೋಂದಣಿಗೆ ಅವಕಾಶ ಇಲ್ಲ. ಹಾಗಾಗಿ ಸರ್ಕಾರದ ಸೂಚನೆ ಕಾರ್ಯಗತವಾಗಿಲ್ಲ. ಗ್ರಾಮೀಣ ಸೇವೆ ಕಡ್ಡಾಯ ಕೇವಲ ಸರ್ಕಾರಿ ಕೋಟಾದ ವಿದ್ಯಾರ್ಥಿಗಳಿಗಷ್ಟೇ ಅನ್ವಯ. ಗ್ರಾಮೀಣ ಸೇವೆ ಒಪ್ಪದವರು ₹15 ಲಕ್ಷ ದಂಡ ಕಟ್ಟಿ ಷರತ್ತಿನಿಂದ ಮುಕ್ತವಾಗಬಹುದು. ಇದು ತಾರತಮ್ಯದ ಕಾಯ್ದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರ ಇಂತಹ ತೊಡಕುಗಳನ್ನು ನಿವಾರಿಸಲು 2023ರಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಕೆಲವು ವಿನಾಯಿತಿಗಳ ಕುರಿತು ಚರ್ಚಿಸಿತ್ತು. ನಂತರ ಗ್ರಾಮೀಣ ಸೇವೆ ಕಡ್ಡಾಯ ಕೈಬಿಡಲು ಸಮ್ಮತಿಸಿತ್ತು. ಆದರೆ ಹೈಕೋರ್ಟ್ ಗ್ರಾಮೀಣ ಸೇವೆಯನ್ನು ಎತ್ತಿ ಹಿಡಿದ ಕಾರಣ ಸಂಪುಟದ ತೀರ್ಮಾನ ಜಾರಿಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.