ADVERTISEMENT

ತೃತೀಯ ಲಿಂಗಿಗಳಿಗೆ ಶೇ 1ರಷ್ಟು ಮೀಸಲಾತಿ: ಹೈಕೋರ್ಟ್‌ಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 1:20 IST
Last Updated 20 ಜೂನ್ 2021, 1:20 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಖಾಲಿ ಇರುವ ಸರ್ಕಾರಿ ಹುದ್ದೆಗಳಲ್ಲಿ ತೃತೀಯ ಲಿಂಗಿ ಸಮುದಾಯದವರಿಗೆ ಶೇ 1ರಷ್ಟು ಹುದ್ದೆ ಕಾಯ್ದಿರಿಸಲು ಕರ್ನಾಟಕ ನಾಗರಿಕ ಸೇವೆಗಳ ನಿಯಮಾವಳಿಗೆ ತಿದ್ದುಪಡಿ ತರಲು ಪ್ರಸ್ತಾಪಿಸಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ತೃತೀಯ ಲಿಂಗಿಗಳ ಪರ ಕೆಲಸ ಮಾಡುವ ‘ಸಂಗಮ’ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಿದ ಸರ್ಕಾರ, ಈ ವಿವರ ನೀಡಿದೆ.

‘ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಪಡೆಯುವುದು ತೃತೀಯ ಲಿಂಗಿಗಳ ಮೂಲಭೂತ ಹಕ್ಕು’ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದನ್ನು ಉಲ್ಲಂಘಿಸಿ ಪೊಲೀಸ್ ಇಲಾಖೆ 2,467 ಸಿಬ್ಬಂದಿ ನೇಮಕಕ್ಕೆ ಮುಂದಾಗಿದೆ. ಪುರುಷ ಮತ್ತು ಮಹಿಳೆಯರಿಗಷ್ಟೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ’ ಎಂದು ಅರ್ಜಿದಾರರು ಆರೋಪಿಸಿದರು.

ADVERTISEMENT

‘ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗ ಸೇರಿ ಪ್ರತಿಯೊಂದು ವಿಭಾಗದಲ್ಲೂ ಶೇ 1ರಷ್ಟು ಹುದ್ದೆಯನ್ನು ತೃತೀಯ ಲಿಂಗಿಗಳ ಸಮುದಾಯಕ್ಕೆ ಮೀಸಲಿಡಲಾಗುವುದು. ಈ ಸಂಬಂಧ ಮೇ 13ರಂದು ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಇದಕ್ಕೆ ಯಾರಿಂದಲೂ ಆಕ್ಷೇಪಣೆ ಬಂದಿಲ್ಲ’ ಎಂದು ಸರ್ಕಾರದ ಪರ ವಕೀಲರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.