ADVERTISEMENT

ಕಟ್ಟಡ, ಮೂಲ ಸೌಕರ್ಯಗಳಿಗೂ ಇಲ್ಲ ಅನುಮತಿ: ಪ್ರತ್ಯೇಕ ಕ್ಯಾಂಪಸ್‌ ಇಲ್ಲದ 8 ವಿ.ವಿ!

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 19:32 IST
Last Updated 11 ನವೆಂಬರ್ 2022, 19:32 IST
ರಾಜ್ಯ ಸರ್ಕಾರ
ರಾಜ್ಯ ಸರ್ಕಾರ   

ಬೆಂಗಳೂರು: ಹೊಸದಾಗಿ ಅಸ್ತಿತ್ವಕ್ಕೆ ಬಂದ 8 ವಿಶ್ವವಿದ್ಯಾಲಯಗಳಿಗೆ ಪ್ರತ್ಯೇಕ ಕ್ಯಾಂಪಸ್‌, ಹೆಚ್ಚುವರಿ ಸಿಬ್ಬಂದಿ, ಮೂಲಸೌಕರ್ಯ ಒದಗಿಸಲು ಸಾಧ್ಯವಿಲ್ಲ. ಇರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಸರ್ಕಾರ ಸೂಚಿಸಿದೆ.

ವಿಶ್ವವಿದ್ಯಾಲಯಗಳ ರಚನೆ ಸಂಬಂಧ ಹೊರಡಿಸಲಾಗಿರುವ ಆದೇಶದಲ್ಲಿ ಈ ಬಗ್ಗೆ ನಿರ್ದೇಶನ ನೀಡಲಾಗಿದೆ.

ಸರ್ಕಾರ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮಕ್ಕೆ ತಿದ್ದುಪಡಿ ತಂದು ಇದೇ ವರ್ಷದ ಅ.10ರಂದು ಚಾಮರಾಜನಗರ, ಹಾಸನ, ಬೀದರ್‌, ಕೊಡಗು, ಕೊಪ್ಪಳ, ಬಾಗಲಕೋಟೆ, ಹಾವೇರಿ ಜಿಲ್ಲೆಗಳಲ್ಲಿ ಏಳು ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಹಾಗೂ ಏಕಾತ್ಮಕ ಸ್ವರೂಪದ ಮಂಡ್ಯ ವಿಶ್ವವಿದ್ಯಾಲಯಕ್ಕೆ ಸಂಯೋಜಿತ ಸ್ಥಾನ ನೀಡಲು ಘೋಷಣೆ ಹೊರಡಿಸಿತ್ತು. ಈಗ ಆರ್ಥಿಕ, ಭೌತಿಕ ಹಾಗೂ ಮಾನವ ಸಂಪನ್ಮೂಲಗಳ ಕುರಿತಂತೆ ಹಲವು ಷರತ್ತುಗಳನ್ನು ವಿಧಿಸಿ, ಆದೇಶ ಹೊರಡಿಸಲಾಗಿದೆ.

ADVERTISEMENT

ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ ಹೊಸದಾಗಿ ಜಮೀನು ಖರೀದಿಸುವಂತಿಲ್ಲ. ಹೊಸ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಈಗಿರುವ ಸ್ನಾತಕೋತ್ತರ ಕೇಂದ್ರಗಳಲ್ಲೇ ಕಾರ್ಯ ನಿರ್ವಹಿಸಬೇಕು. ಮೂಲ ವಿಶ್ವವಿದ್ಯಾಲಯಗಳಲ್ಲಿ ಪ್ರಸ್ತುತ ಇರುವ ಮಂಜುರಾದ ಹುದ್ದೆಗಳಲ್ಲಿ ಅಗತ್ಯವಿರುವಷ್ಟು ಪಡೆಯಬೇಕು. ಯಾವುದೇ ಹೊಸ ಹುದ್ದೆಗಳನ್ನು ಸೃಜಿಸಬಾರದು. ಹುದ್ದೆಗಳನ್ನು ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಬಾರದು. ನೂತನ ವಿಶ್ವವಿದ್ಯಾಲಯಗಳ ಕೇಂದ್ರ ಸ್ಥಾನವಾಗಿ ಪರಿವರ್ತಿತವಾದ ಸ್ನಾತಕೋತ್ತರ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ, ಬೋಧಕೇತರ ಸಿಬ್ಬಂದಿ ಹೊಸ ವಿಶ್ವವಿದ್ಯಾಲಯಗಳಲ್ಲೇ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.

ಈ ಶೈಕ್ಷಣಿಕ ವರ್ಷ ಪೂರ್ಣಗೊಳ್ಳುವವರೆಗೆ ಶೈಕ್ಷಣಿಕ ಚಟುವಟಿಕೆಗಳನ್ನು ಸಮಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಮೂಲ ವಿಶ್ವವಿದ್ಯಾಲಯಗಳಲ್ಲೇ ಪೂರ್ಣಗೊಳಿಸಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಜಾಗ್ರತೆ ವಹಿಸಬೇಕು. 2023–24ನೇ ಸಾಲಿನಿಂದ ಸಂಗ್ರಹಿಸುವ ಶುಲ್ಕಗಳನ್ನು ಹೊಸ ವಿಶ್ವವಿದ್ಯಾಲಯಗಳು ಬಳಸಿಕೊಳ್ಳಬಹುದು. ಬಜೆಟ್‌ನಲ್ಲಿ ಘೋಷಿಸಿದ ₹ 2 ಕೋಟಿ ಅನುದಾನವನ್ನು ಸಿಬ್ಬಂದಿ ವಿಲೀನಾತಿ ಆದೇಶದ ನಂತರ ಬಿಡುಗಡೆ ಮಾಡಲಾಗುವುದು. ಪ್ರಸ್ತುತ ಇರುವ ಸ್ಥಳ, ಕಟ್ಟಡ, ಸಿಬ್ಬಂದಿ ಹಾಗೂ ನೀಡುವ ಸೀಮಿತ ಅನುದಾವನ್ನು ಬಳಸಿಕೊಂಡು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ಹೆಚ್ಚು ಮಾನವ ಸಂಪನ್ಮೂಲ ಬಳಸದೇ, ಗರಿಷ್ಠ ತಂತ್ರಾಂಶ ಬಳಕೆ ಮಾಡಿಕೊಂಡು ಕಾರ್ಯನಿರ್ವಹಿಸುವಂತೆ ಷರತ್ತುಗಳನ್ನು ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.