ADVERTISEMENT

ರಾಜ್ಯದಾದ್ಯಂತ ಬಿಜೆಪಿ ಮಹಾಸಂಪರ್ಕ ದಿನ 23ಕ್ಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 19:14 IST
Last Updated 20 ಜೂನ್ 2020, 19:14 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2ನೇ ಅವಧಿಯ ಮೊದಲ ವರ್ಷ ಪೂರ್ಣ ಗೊಂಡಿರುವ ಸಂದರ್ಭದಲ್ಲಿ ಪಕ್ಷ ಆಯೋಜಿಸಿರುವ ‘ಸಮರ್ಥ ನಾಯಕತ್ವ–ಸ್ವಾವಲಂಬಿ ಭಾರತ ಅಭಿಯಾನ’ದ ಅಂಗವಾಗಿ ಜೂನ್ 23ರಂದು ಮಹಾಸಂಪರ್ಕ ದಿನ ಆಚರಿಸಲಾಗುವುದು’ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.

‘ಪಕ್ಷದ ಎಲ್ಲ ಹಂತದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತಗಟ್ಟೆ ಮಟ್ಟದಲ್ಲಿ ಸಂಚರಿಸಿ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. 30ರ ಒಳಗಾಗಿ ಎಲ್ಲ ಮಂಡಲ ಮಟ್ಟದ ರ‍್ಯಾಲಿಗಳನ್ನು ನಡೆಸಬೇಕು’ ಎಂದು ಅವರು ಶನಿವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ಅಭಿಯಾನದ ಭಾಗವಾಗಿ ರಾಜ್ಯದ 58 ಸಾವಿರ ಮತಗಟ್ಟೆಗಳ 50 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸುವ ಗುರಿ ಹೊಂದಲಾಗಿದೆ. ಇದುವರೆಗೆ 37,598 ಮತಗಟ್ಟೆ‌ಗಳಲ್ಲಿ 4.41 ಲಕ್ಷ ಕಾರ್ಯಕರ್ತರು 28.91 ಲಕ್ಷ ಮನೆಗಳನ್ನು ಸಂಪರ್ಕಿಸಿದ್ದಾರೆ. ಇದುವರೆಗೆ 7 ಮೋರ್ಚಾಗಳಲ್ಲಿ 83 ರ‍್ಯಾಲಿಗಳು ನಡೆದಿದ್ದು, ಅಂದಾಜು 20,750 ಜನ ಭಾಗವಹಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇದೇ 14ರಂದು ನಡೆಸಿದ ವರ್ಚ್ಯುವಲ್ ರ‍್ಯಾಲಿಯಲ್ಲಿ 59 ಲಕ್ಷಕ್ಕೂ ಅಧಿಕ ಕಾರ್ಯಕರ್ತರು, ಹಿತೈಷಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ವಿಶ್ವಾದ್ಯಂತ ಸುಮಾರು 2.29 ಕೋಟಿಗೂ ಹೆಚ್ಚು ಜನರು ಪಾಲ್ಗೊಂಡಿದ್ದರು’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಪದಾಧಿಕಾರಿಗಳು, ಜನಪ್ರತಿನಿಧಿಗಳು ಮನೆಮನೆಗೆ ತೆರಳಿ ಮೋದಿ ಸರ್ಕಾರದ ಒಂದು ವರ್ಷದ ಸಾಧನೆ, ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ವಿಶೇಷವಾಗಿ ಚೀನಾ ಅಟ್ಟಹಾಸವನ್ನು ಮುರಿಯಲು ಸ್ವದೇಶಿ ವಸ್ತುಗಳನ್ನು ಬಳಸಬೇಕೆಂದು ಮನವಿ ಮಾಡಲಿದ್ದಾರೆ. ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ವೀರ ಮರಣವನ್ನಪ್ಪಿದ ಸೈನಿಕರಿಗೆ ಅರ್ಪಿಸುವ ನಿಜ ಶ್ರದ್ಧಾಂಜಲಿ ಆಗಲಿದೆ’ ಎಂದು ರವಿಕುಮಾರ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.