ADVERTISEMENT

ವಾರ್ಡ್‌ ಮರು ವಿಂಗಡಣೆ ಸಿಂಧುತ್ವ: ಹೈಕೋರ್ಟ್‌ ನಿರ್ಧಾರ ಕೈಗೊಳ್ಳಬಹುದು– ಸುಪ್ರೀಂ

ಚುನಾವಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 19:59 IST
Last Updated 26 ಆಗಸ್ಟ್ 2022, 19:59 IST
   

ನವದೆಹಲಿ: ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳ ಬಗ್ಗೆ ಹೈಕೋರ್ಟ್‌ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಬಿಬಿಎಂ‍ಪಿ ಚುನಾವಣಾ ‍ಪ್ರಕ್ರಿಯೆಗೆ ತಡೆ ನೀಡುವುದಿಲ್ಲ ಎಂದು ಒತ್ತಿ ಹೇಳಿತು.

ಬಿಬಿಎಂಪಿ ಚುನಾವಣೆ ಕುರಿತ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಗಳಾದ ಎಸ್‌.ಅಬ್ದುಲ್‌ ನಜೀರ್‌ ಹಾಗೂ ಜೆ.ಕೆ.ಮಹೇಶ್ವರಿ ಅವರನ್ನು ಒಳಗೊಂಡ ಪೀಠವು, ‘ರಿಟ್‌ ಅರ್ಜಿ ಹಾಗೂ ಸಂಬಂಧಿಸಿದ ವಿಷಯಗಳನ್ನು ಅರ್ಹತೆಯ ಮೇಲೆ ಹಾಗೂ ಕಾನೂನಿಗೆ ಅನುಸಾರವಾಗಿ ಹೈಕೋರ್ಟ್‌ ನಿರ್ಧರಿಸುವುದು ನ್ಯಾಯಸಮ್ಮತ ಹಾಗೂ ಸರಿಯಾದುದು ಎಂದು ನಾವು ಭಾವಿಸುತ್ತೇವೆ’ ಎಂದು ಹೇಳಿತು.

ಮಧ್ಯಂತರ ಆದೇಶವನ್ನು ಹೊರಡಿಸುವ ಕೋರಿಕೆಯನ್ನು ಹೈಕೋರ್ಟ್ ಪರಿಗಣಿಸಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ADVERTISEMENT

‘ವಾರ್ಡ್‌ ಮರುವಿಂಗಡಣೆಯ ಸಿಂಧುತ್ಚ ಪ್ರಶ್ನಿಸಿ ನ್ಯಾಯಾಲಯ
ದಲ್ಲಿ ಅರ್ಜಿ ಸಲ್ಲಿಕೆಯಾಗಿರುವುದರಿಂದ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಹೇಳಿದರು. ‘ನಾವು ಚುನಾವಣೆಗೆ ತಡೆಯಾಜ್ಞೆ ನೀಡಿಲ್ಲ’ ಎಂದು ನ್ಯಾಯಪೀಠವು ಮೌಖಿಕವಾಗಿ ಹೇಳಿತು.

ಬಿಬಿಎಂಪಿ ಸದಸ್ಯರ ಅಧಿಕಾರದ ಅವಧಿ 2020ರ ಸೆ‍ಪ್ಟೆಂಬರ್‌ನಲ್ಲಿ ಮುಕ್ತಾಯಗೊಂಡಿದೆ. ಮರು ವಿಂಗಡಣೆ ಹಾಗೂ ಮೀಸಲಾತಿ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳನ್ನು ಕಾಲಮಿತಿಯಲ್ಲಿ ಹೈಕೋರ್ಟ್‌ ಇತ್ಯರ್ಥ ಮಾಡಬೇಕು ಎಂದು ಮೀನಾಕ್ಷಿ ಅರೋರಾ ಸೇರಿ ಹಲವರು ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕ ಚುನಾವಣಾ ಆಯೋಗವು ಬಿಬಿಎಂಪಿ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಬೇಕು ಎಂದು ಅರೋರಾ ವಾದ ಮಂಡಿಸಿದರು.

ಈ ಪ್ರಕರಣವನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಇತ್ಯರ್ಥಪಡಿಸು
ವಂತೆ ಹೈಕೋರ್ಟ್‌ಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಪೀಠ
ಸ್ಪಷ್ಟಪಡಿಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್‌, ‘ನಾವು ವಾರ್ಡ್‌ ಮರುವಿಂಗಡಣೆ ಸಿಂಧುತ್ವವನ್ನು ಪ್ರಶ್ನಿಸಿದ್ದೇವೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ಸ್ಪಷ್ಟನೆ ಪಡೆಯುವಂತೆ ಹೈಕೋರ್ಟ್‌ ಹೇಳಿದೆ. ಬಿಜೆಪಿಗೆ ಅನುಕೂಲವಾಗು ವಂತೆ ಮರು ವಿಂಗಡಣೆ ಪ್ರಕ್ರಿಯೆ ನಡೆಸಲಾಗಿದೆ’ ಎಂದರು.

ಕರ್ನಾಟಕ ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಹಾಜರಾಗಿ ವಾದ ಮಂಡಿಸಿದರು.

ಬಳಿಕ, ಪೀಠವು ವಿಚಾರಣೆಯನ್ನು ಎಂಟು ವಾರಗಳ ಕಾಲ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.