ADVERTISEMENT

ಸರಗಳ್ಳತನ: ಆರೋಪಿಗೆ ಜಾಮೀನು ನೀಡಲು ನಕಾರ

​ಪ್ರಜಾವಾಣಿ ವಾರ್ತೆ
Published 15 ಮೇ 2021, 19:31 IST
Last Updated 15 ಮೇ 2021, 19:31 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಲಸಿಕೆ ತೆಗೆದುಕೊಂಡು ಮನೆಗೆ ಹಿಂದಿರುಗಿದ ಮಹಿಳೆಯೊಬ್ಬರನ್ನು ಹಿಂಬಾಲಿಸಿಕೊಂಡು ಬಂದು ಸರಗಳ್ಳತನ ಮಾಡಿದ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ಜಗದಾಂಬ ಎಂಬ ವೃದ್ಧೆಯೊಬ್ಬರು ಮಾ.16ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ಪಡೆದು ಮಧ್ಯಾಹ್ನ 12.45ರ ಸುಮಾರಿನಲ್ಲಿ ಮನೆಗೆ ಮರಳಿದ್ದರು. ಅವರನ್ನು ಹಿಂಬಾಲಿಸಿಕೊಂಡು ಬಂದ ನಾಗೇಂದ್ರ ಬಾಬು ಎಂಬ ಆರೋಪಿ ಮನೆಗೆ ನುಗ್ಗಿ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದ.

ವೃದ್ಧೆ ಕಿರುಚಿಕೊಂಡಾಗ ಅವರ ಸಹೋದರ ಮತ್ತು ಗ್ರಾಮದ ಜನ ಅಟ್ಟಿಸಿಕೊಂಡು ಹೋದರೂ ಆರೋಪಿ ಸಿಕ್ಕಿರಲಿಲ್ಲ. ಅರಸೀಕೆರೆ ಠಾಣೆಗೆ ಜಗದಾಂಬ ದೂರು ನೀಡಿದ್ದರು. ಅದೇ ದಿನ ಸಂಜೆ 5 ಗಂಟೆಗೆ ಆರೋಪಿಯನ್ನು ಬಂಧಿಸಿದ ಪೊಲೀಸರು, ಮಾಂಗಲ್ಯ ಸರ ವಶಕ್ಕೆ ಪಡೆದಿದ್ದರು.

ADVERTISEMENT

ಆರೋಪಿಯ ನಾಗೇಂದ್ರ ಬಾಬು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ನಾಗೇಂದ್ರ ಬಾಬು ಹೈಕೋರ್ಟ್ ಮೆಟ್ಟಿಲೇರಿದ್ದರು. ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರ ವಾದಿಸಿದರು.

‘ಈ ಅಪರಾಧವನ್ನು ಸಣ್ಣದೆಂದು ಪರಿಗಣಿಸಲು ಆಗುವುದಿಲ್ಲ. ಮಹಿಳೆಯ ಸುರಕ್ಷತೆಯೂ ಇದರಲ್ಲಿ ಒಳಗೊಂಡಿದೆ. ಹೀಗಾಗಿ, ಅರ್ಜಿದಾರ ಜಾಮೀನು ಪಡೆಯಲು ಅರ್ಹರಲ್ಲ’ ಎಂದು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.