ADVERTISEMENT

ಎಂ.ಬಿ.ಪಾಟೀಲ ಮನೆಯಲ್ಲಿ ಕಳವು: ಒಡಿಶಾದಲ್ಲಿ ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 14:51 IST
Last Updated 1 ಆಗಸ್ಟ್ 2022, 14:51 IST
ಬಂಧಿತ ಆರೋಪಿ ಜಯಂತ್‌ ದಾಸ್‌ 
ಬಂಧಿತ ಆರೋಪಿ ಜಯಂತ್‌ ದಾಸ್‌    

ಬೆಂಗಳೂರು: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರ ನಿವಾಸದಲ್ಲಿ ನಡೆದಿದ್ದ ಕಳವು ಪ್ರಕರಣದ ಆರೋಪಿಯನ್ನು ಪೊಲೀಸರು ಒಡಿಶಾದಲ್ಲಿ ಬಂಧಿಸಿ, ನಗರಕ್ಕೆ ಕರೆತಂದಿದ್ದಾರೆ.

ಶಾಸಕರ ಮನೆಯಲ್ಲಿ ಲಾಂಡ್ರಿ ಕೆಲಸ ಮಾಡುತ್ತಿದ್ದ ಜಯಂತ್‌ ದಾಸ್‌ ಬಂಧಿತ ಆರೋಪಿ.

ಆರೋಪಿಯನ್ನು ಐದು ದಿನಗಳ ಕಾಲ ವಶಕ್ಕೆ ಪಡೆದಿರುವ ಸದಾಶಿವನಗರದ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ADVERTISEMENT

‘ಐದು ವರ್ಷಗಳಿಂದ ಶಾಸಕರ ಮನೆಯಲ್ಲಿ ಆರೋಪಿ ಕೆಲಸಕ್ಕಿದ್ದ. ಆತನ ಮೇಲೆಯೇ ಅನುಮಾನ ವ್ಯಕ್ತಪಡಿಸಿ ದೂರು ನೀಡಲಾಗಿತ್ತು. ಆರೋಪಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಯಾರ್‍ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಆರೋಪಿಯಿಂದ ₹ 70 ಸಾವಿರ ನಗದು, ₹ 50 ಸಾವಿರ ಮೌಲ್ಯದ ವಾಚ್‌, ₹ 10 ಸಾವಿರ ಮೌಲ್ಯದ ಮೊಬೈಲ್‌ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಒಂದೂವರೆ ತಿಂಗಳ ಹಿಂದೆ ಮನೆಯ ಮಲಗುವ ಕೋಣೆಯಲ್ಲಿದ್ದ ವಿವಿಧ ಕಂಪನಿಯ 6 ವಾಚ್‌ಗಳು, ನೋಕಿಯಾ ಮೊಬೈಲ್‌ ಹಾಗೂ ವಿದೇಶಿ ಕರೆನ್ಸಿ ಕಳವು ಮಾಡಲಾಗಿತ್ತು. ಮನೆಯಲ್ಲಿದ್ದ ಕೆಲಸಗಾರರನ್ನು ವಿಚಾರಿಸಿದ್ದೆವು. ದೂರು ನೀಡುವುದಾಗಿ ಹೇಳಿದಾಗ ಜಯಂತ್‌ ದಾಸ್‌ ಮರುದಿನದಿಂದ ಕೆಲಸಕ್ಕೇ ಬಂದಿಲ್ಲ’ ಎಂದು ಮನೆಯಲ್ಲಿ ಅಡುಗೆ ಕೆಲಸಕ್ಕಿದ್ದ ಸಿದ್ದು ಎಂಬಾತ ಜೂನ್‌ 30ರಂದು ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.