ADVERTISEMENT

ಪ್ರಯಾಣದ ಟಿಕೆಟ್‌ ದರ ಹೆಚ್ಚಳವಿಲ್ಲ: ಲಕ್ಷ್ಮಣ ಸವದಿ

ಪ್ರಯಾಣಿಕರಿದ್ದರೆ ರಾತ್ರಿ ಬಸ್‌ ಸಂಚಾರ:

​ಪ್ರಜಾವಾಣಿ ವಾರ್ತೆ
Published 26 ಮೇ 2020, 16:37 IST
Last Updated 26 ಮೇ 2020, 16:37 IST

ಹುಬ್ಬಳ್ಳಿ: ‘ಬಸ್‌ ಪ್ರಯಾಣದ ಟಿಕೆಟ್‌ ದರ ಹೆಚ್ಚಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಸಾರಿಗೆ ಸಂಸ್ಥೆಗೆ ಸೇರಿದ ಯಾವುದೇ ನಿಗಮದ ಸಿಬ್ಬಂದಿಯನ್ನೂ ಕೆಲಸದಿಂದ ತೆಗೆಯುವುದಿಲ್ಲ’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ನಗರದಲ್ಲಿ ಮಂಗಳವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸ್‌ಗಳ ನಿರ್ವಹಣೆ, ಸಿಬ್ಬಂದಿ ಸಂಬಳ ಸೇರಿದಂತೆ ಎಲ್ಲದರ ವೆಚ್ಚವೂ ಹೆಚ್ಚಾಗಿದೆ. ಆದರೆ, ಬಸ್‌ ದರ ಹೆಚ್ಚಾಗಿಲ್ಲ. ನಷ್ಟಕ್ಕೆ ಬಸ್‌ ದರ ಹೆಚ್ಚಸದಿರುವುದೇ ಕಾರಣ. ಹಾಗೆಂದು ಈಗ ದರ ಹೆಚ್ಚಿಸುವುದಿಲ್ಲ’ ಎಂದರು.

‘ಅಗತ್ಯ ಪ್ರಮಾಣದ ಪ್ರಯಾಣಿಕರಿದ್ದರೆ ರಾತ್ರಿ ವೇಳೆಯೂ ಬಸ್‌ ಸಂಚಾರ ಆರಂಭಿಸಲಾಗುವುದು. ಆದರೆ, ಖಾಲಿ ಬಸ್‌ಗಳನ್ನು ಓಡಿಸುವುದಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7ರವರೆಗೆ ಸಾರಿಗೆ ಸೇವೆ ನೀಡಲಾಗುತ್ತಿದೆ. ದೂರದ ಊರುಗಳ ಪ್ರಯಾಣ ಅವಧಿಯಲ್ಲಿ ಸ್ವಲ್ಪ ಹೆಚ್ಚಳವಾದರೂ ಸೇವೆ ನೀಡಲಾಗುವುದು. ಕೋವಿಡ್ ಲಾಕ್ ಡೌನ್ ಜಾರಿಯಾದಾಗಿನಿಂದ ಇಲ್ಲಿಯವರೆಗೂ ನಿಗಮಗಳು ₹1, 700 ಕೋಟಿ ನಷ್ಟ ಅನುಭವಿಸಿವೆ’ ಎಂದರು.

ಅಂತರ ಕಾಪಾಡುವ ನಿಟ್ಟಿನಲ್ಲಿ ಒಂದು ಬಸ್‌ನಲ್ಲಿ ಕೇವಲ 30 ಜನರಿಗೆ ಮಾತ್ರ ಅವಕಾಶವಿದೆ. ಜೂನ್‌ 1ರ ನಂತರದ ಕೇಂದ್ರದ ಮಾರ್ಗಸೂಚಿಗಳನ್ನು ನೋಡಿಕೊಂಡು ಮುಂದಿನ ಕ್ರಮ ವಹಿಸಲಾಗುವುದು.

‘ಒಟ್ಟು 1.30 ಲಕ್ಷ ಸಿಬ್ಬಂದಿ ಇದ್ದಾರೆ. ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ಕೈ ಬಿಡುವುದಿಲ್ಲ. ಕೆಲವರಿಗೆ ಹೆಚ್ಚುವರಿ ಕೆಲಸ ನೀಡಲಾಗುತ್ತಿದ್ದು, ಅದನ್ನು ಸಮಾನವಾಗಿ ಎಲ್ಲರಿಗೂ ಹಂಚಲು ತಿಳಿಸಿದ್ದೇನೆ. ವಾಕರಸಾ ಸಂಸ್ಥೆಗೆ ಸಿಬ್ಬಂದಿ ವೇತನಕ್ಕೆ ₹96 ಕೋಟಿ, ಇಂಧನಕ್ಕೆ ₹90 ಕೋಟಿ ಬೇಕು. ಈಗ ಪ್ರತಿ ತಿಂಗಳು ಅಂದಾಜು ₹90 ಕೋಟಿ ನಷ್ಟವಾಗುತ್ತಿದೆ’ ಎಂದರು.

ನೀಲನಕ್ಷೆಗೆ ಸೂಚನೆ:ಕೊರೊನಾ ಇನ್ನೂ ಎಷ್ಟು ದಿನಗಳ ಕಾಲ ಮುಂದುವರೆಯಲಿದೆ ಎಂಬ ಅಂದಾಜು ಯಾರಿಗೂ ಇಲ್ಲ. ಸಂಸ್ಥೆಯ ಭವಿಷ್ಯ ಕೊರೊನಾದ ಅವಲಂಬನೆಯಾಗಿದೆ. ವೆಚ್ಚ ಕಡಿಮೆ ಮಾಡುವುದು, ಹಾನಿಯನ್ನು ತಗ್ಗಿಸಲು ಮುಂದಿನ ಮೂರು ತಿಂಗಳು ಏನು ಮಾಡಬಹುದು ಎಂಬುದರ ನೀಲನಕ್ಷೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಸಂಸ್ಥೆಯಲ್ಲಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗುವುದು. ಆ ಮೂಲಕ ಹಾನಿ ಪ್ರಮಾಣ ಕಡಿಮೆ ಮಾಡಲಾಗುವುದು. ಪ್ರಯಾಣಿಕರಿಲ್ಲದೆ ಅನಗತ್ಯವಾಗಿ ಹೆಚ್ಚು ಮಾರ್ಗಗಳಲ್ಲಿ ಬಸ್‌ ಓಡಿಸದಂತೆ ಸೂಚಿಸಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಅಮೃತ ದೇಸಾಯಿ, ವಾಕರಸಾಸಂ ಅಧ್ಯಕ್ಷ ವಿ.ಎಸ್.ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.