ADVERTISEMENT

ಬಸವರಾಜ ಬೊಮ್ಮಾಯಿ ನಾಯಕತ್ವ ಬಗ್ಗೆ ಅಸಮಾಧಾನ ಇಲ್ಲ: ಅರುಣ್ ಸಿಂಗ್

ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 19:31 IST
Last Updated 7 ಸೆಪ್ಟೆಂಬರ್ 2021, 19:31 IST
ಅರುಣ್ ಸಿಂಗ್
ಅರುಣ್ ಸಿಂಗ್   

ಬೆಂಗಳೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆ ಎದುರಿಸುವ ಕುರಿತು ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯಿಂದ ಪಕ್ಷದಲ್ಲಿ ಯಾರಿಗೂ ಅಸಮಾಧಾನ ಆಗಿಲ್ಲ’ ಎಂದು ಬಿಜೆಪಿಯ ರಾಜ್ಯ ಉಸ್ತುವಾರಿ ವಹಿಸಿರುವ ಅರುಣ್‌ ಸಿಂಗ್‌ ಹೇಳಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಬೊಮ್ಮಾಯಿ ನಾಯಕತ್ವಕ್ಕೆ ಯಾರಾದರೂ ಏಕೆ ಅಸಮಾಧಾನಗೊಳ್ಳಬೇಕು? ಅವರು ಈಗ ಮುಖ್ಯಮಂತ್ರಿ ಆಗಿದ್ದಾರೆ. ಅವರ ನೇತೃತ್ವದಲ್ಲೇ 2023 ರ ಚುನಾವಣೆಯನ್ನು ಎದುರಿಸಲಿದ್ದೇವೆ’ ಎಂದರು.

‘ಬೊಮ್ಮಾಯಿ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸುವುದಾಗಿ ಅಮಿತ್‌ ಶಾ ಅವರು ಸ್ಪಷ್ಟಪಡಿಸಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಅವರು ಪಕ್ಷದ ಸಂಘಟನೆ ಬಲಪಡಿಸುತ್ತಾರೆ. ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಾರೆ’ ಎಂದು ಅವರು ಹೇಳಿದರು.

ADVERTISEMENT

‘ಬೊಮ್ಮಾಯಿ ಮತ್ತು ಕಟೀಲ್‌ ನಾಯಕತ್ವದಲ್ಲಿ ಪಕ್ಷ ಇತ್ತೀಚಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಿಜಯದ ಯಾತ್ರೆ ನಡೆಸಿದೆ. 2023 ರ ವಿಧಾನಸಭಾ ಚುನಾವಣೆಯಲ್ಲೂ ಭರ್ಜರಿ ವಿಜಯ ಸಾಧಿಸಿ, ರಾಜ್ಯದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ’ ಎಂದು ಅರುಣ್‌ ಸಿಂಗ್‌ ತಿಳಿಸಿದರು.

ಸಿಂಗ್ ಭೇಟಿಯಾದ ಶೆಟ್ಟರ್: ಶಾಸಕ ಜಗದೀಶ್‌ ಶೆಟ್ಟರ್ ಅವರು ಅರುಣ್‌ ಸಿಂಗ್ ಅವರನ್ನು ಬೆಳಿಗ್ಗೆ ಭೇಟಿ ಮಾಡಿ ಚರ್ಚಿಸಿದರು.

‘ಇದೊಂದು ಸೌಜನ್ಯದ ಭೇಟಿಯಾಗಿತ್ತು. ಈಚೆಗೆ ಮುಗಿದ ಮಹಾನಗರ ಪಾಲಿಕೆ ಚುನಾವಣೆಗಳ ಬಗ್ಗೆ ಚರ್ಚಿಸಲಾಯಿತು. ರಾಜಕೀಯದ ವಿಚಾರ ಚರ್ಚಿಸಲಿಲ್ಲ’ ಎಂದು ಶೆಟ್ಟರ್‌ ಅವರು ಸುದ್ದಿಗಾರರಿಗೆ ಹೇಳಿದರು.

ಶೆಟ್ಟರ್‌ ಅವರು ಪ್ರಲ್ಹಾದ ಜೋಶಿಯವರ ಮಗಳ ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ಬಂದಿದ್ದರು.

ದಾವಣಗೆರೆಯಲ್ಲಿ ಅಮಿತ್‌ ಶಾ ಅವರು ಬೊಮ್ಮಾಯಿ ಆಡಳಿತವನ್ನು ಶ್ಲಾಘಿಸಿ, ಚುನಾವಣೆಯ ನೇತೃತ್ವದ ಬಗ್ಗೆ ಹೇಳಿಕೆ ನೀಡಿದ ಬಳಿಕ ಶೆಟ್ಟರ್‌ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹೇಳಿಕೆ ಬಗ್ಗೆ ಚರ್ಚಿಸಿದ್ದರು.

ಸಂತೋಷ್‌ ಭೇಟಿ ಮಾಡಿದ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವದೆಹಲಿಯಲ್ಲಿ ಮಂಗಳವಾರ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಕುರಿತು ಚರ್ಚೆ ನಡೆಸಿದರು.

ಸುಮಾರು 40 ನಿಮಿಷಗಳ ಕಾಲದ ಮಾತುಕತೆಯ ಸಂದರ್ಭದಲ್ಲಿ ಬೊಮ್ಮಾಯಿ ಜತೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇದ್ದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ, ಇತ್ತೀಚಿಗೆ ಮುಗಿದ ಮಹಾನಗರ ಪಾಲಿಕೆಗಳ ಚುನಾವಣೆ ಫಲಿತಾಂಶ ಮತ್ತು ಪಕ್ಷದ ಸಂಘಟನೆ ಬಲಪಡಿಸುವ ಕುರಿತು ಚರ್ಚಿಸಲಾಯಿತು ಎಂದರು.

‘ಸಂಪುಟದಲ್ಲಿ ಖಾಲಿ ಉಳಿದಿರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಚರ್ಚೆ ನಡೆಯಲಿಲ್ಲ’ ಎಂದೂ ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.