ADVERTISEMENT

ಆಕ್ಸಿಜನ್ ಕೊರತೆ ಇಲ್ಲ, ಬೆಂಗಳೂರಿನಲ್ಲಿ ಬಿಗಿ ಕ್ರಮ ಅನಿವಾರ್ಯ: ಸುಧಾಕರ್

‘ನಮ್ಮ ಬಳಿ  300 ಟನ್ ಆಕ್ಸಿಜನ್ ಇದೆ'

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 6:31 IST
Last Updated 18 ಏಪ್ರಿಲ್ 2021, 6:31 IST
ಆರೋಗ್ಯ ಸಚಿವ ಡಾ.ಕೆ. ಸುಧಾಕರ್
ಆರೋಗ್ಯ ಸಚಿವ ಡಾ.ಕೆ. ಸುಧಾಕರ್   

ಬೆಂಗಳೂರು: 'ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ. ರಾಜ್ಯಕ್ಕೆ ಅಗತ್ಯ ಇರುವುದು 200 ಟನ್ ಆಕ್ಸಿಜನ್. ಆದರೆ, ನಮ್ಮ ಬಳಿ300 ಟನ್ ಆಕ್ಸಿಜನ್ ಇದೆ' ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, 'ಕಳೆದ ಒಂದು ವರ್ಷದಿಂದ 800 ಟನ್ ಆಕ್ಸಿಜನ್‌ಗೆ ನಮ್ಮ ರಾಜ್ಯದ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿದೆ. ಕೇಂದ್ರದಿಂದ 300 ಟನ್ ಆಕ್ಸಿಜನ್ ರಾಜ್ಯಕ್ಕೆ ಲಭ್ಯವಾಗುತ್ತಿದೆ. ಕೇಂದ್ರ ನೀಡುತ್ತಿರುವ ಆಕ್ಸಿಜನ್ ಪ್ರಮಾಣ ಹೆಚ್ಚಿಸುವಂತೆಯೂ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದೇನೆ' ಎಂದರು.

'ರಾಜ್ಯದಲ್ಲಿ ಆಕ್ಸಿಜನ್ ಅಭಾವ ಇದೆ ಎಂದು ಹೇಳುವುದು ಸರಿಯಲ್ಲ. ಕೆಲವು ಖಾಸಗಿ ನರ್ಸಿಂಗ್ ಹೋಂನವರು ಅವರು ಒಡಂಬಡಿಕೆ ಮಾಡಿಕೊಂಡಿರುವವರಿಂದ ಆಕ್ಸಿಜನ್ ಪೂರೈಕೆ ಆಗದಿದ್ದರೆ, ರಾಜ್ಯದಲ್ಲೇ ಆಕ್ಸಿಜನ್ ಕೊರತೆ ಆಗಿದೆ ಎಂದು ಅರ್ಥ ಅಲ್ಲ. ಖಾಸಗಿ ನರ್ಸಿಂಗ್ ಹೋಂನವರು ಆಕ್ಸಿಜನ್ ಸರಬರಾಜು ಮಾಡುವವರಿಗೆ ಕೊಡಬೇಕಾದ ಬಾಕಿ ಪಾವತಿ ಮಾಡದೇ ಇರುವುದರಿಂದ ಅವರಿಗೆ ಅಕ್ಸಿಜನ್ ಕೊರತೆ ಆಗಿದೆ. ಅದೂ ಕೂಡ ಒಂದೋ‌ ಎರಡೋ ಖಾಸಗಿ ನರ್ಸಿಂಗ್ ಹೋಂ ಗಳಲ್ಲಿ ಮಾತ್ರ' ಎಂದರು.

ADVERTISEMENT

ಬೆಂಗಳೂರು ಲಾಕ್ ಡೌನ್ ಆಗಬಹುದೇ ಎಂಬ ಪ್ರಶ್ನೆಗೆ 'ಬೆಂಗಳೂರಿನಲ್ಲಿ ಕೋವಿಡ್ ಸ್ಥಿತಿಯ ಹಿನ್ನಲೆಯಲ್ಲಿ ಬಿಗಿ ಕ್ರಮ ಅನಿವಾರ್ಯ' ಎಂದುಸುಧಾಕರ್ ಹೇಳಿದರು.

'ಬೆಂಗಳೂರಿನಲ್ಲಿ ದಿನೇ ದಿನೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕೆಲವು ಸಮಸ್ಯೆಗಳು ಎದುರಾಗುತ್ತಿವೆ. ನಮ್ಮ ಐಸಿಯುಗಳ ಸಾಮರ್ಥ್ಯವನ್ನೂ ಮೀರಿ ಹೋಗುತ್ತಿರುವುದರಿಂದ ಸಮಸ್ಯೆ ಆಗುತ್ತಿರುವುದು ನಿಜ. ಹೀಗಾಗಿ ಬೆಂಗಳೂರಿನಲ್ಲಿ ಕೆಲವು ಅತ್ಯಂತ ಬಿಗಿ ಕ್ರಮ ಅನಿವಾರ್ಯ. ಈ ಬಗ್ಗೆಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ. ತಜ್ಞರ ಸಮಿತಿ ಕೊಟ್ಟಿರುವ ವರದಿ ಹಾಗೂ ಕೆಲವು ಪ್ರಮುಖ ಸಲಹೆಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸುತ್ತೇನೆ' ಎಂದರು.

'ಐಸಿಯುಗಳ ಸಮಸ್ಯೆ ಇಲ್ಲವೆಂದು ನಾನು ಹೇಳಿಲ್ಲ. ಎಷ್ಟು ಐಸಿಯುಗಳು ಇವೆಯೋ ಅದಕ್ಕಿಂತ ಹೆಚ್ಚು ಪ್ರಕರಣಗಳು ಬಂದಾಗ ಐಸಿಯು ಸಮಸ್ಯೆ ಆಗಿದೆ. ಆದರೂ ಪ್ರತಿನಿತ್ಯ ಐಸಿಯುಗಳ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಯತ್ನ ಮಾಡುತ್ತಿದ್ದೇವೆ' ಎಂದರು.

'ಇಡೀ ದೇಶದಲ್ಲೇ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆ. ಕೇಂದ್ರ ಸರ್ಕಾರವೇ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆ ಎಂದು ಹೇಳಿದೆ. ದಿನೇ ದಿನೇ ಪಾಸಿಟಿವ್ ಕೇಸ್ ಗಳು ಹೆಚ್ಚಾಗುತ್ತಿರುವುದರಿಂದ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿರುವುದು ನಮಗೂ ಗೊತ್ತಾಗಿದೆ. ಖಂಡಿತವಾಗಿಯೂ ಕೊರೋನಾ ಸೋಂಕು ಸಮುದಾಯಕ್ಕೆ ಹರಡಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.