ADVERTISEMENT

ಮುಖ್ಯಮಂತ್ರಿ ಮಾತಿಗೂ ಸಿಗದ ಕಿಮ್ಮತ್ತು: ಸಂತ್ರಸ್ತರಿಗೆ ಸಿಗದ ಸೂರು

ಚಂದ್ರಹಾಸ ಹಿರೇಮಳಲಿ
Published 16 ಜುಲೈ 2020, 22:06 IST
Last Updated 16 ಜುಲೈ 2020, 22:06 IST
ವರ್ಷವಾದರೂ ಪಳೆಯುಳಿಕೆ ಸ್ಥಿತಿಯಲ್ಲೇ ಇರುವ ಪಚ್ಚಮ್ಮ ಅವರ ಮನೆ
ವರ್ಷವಾದರೂ ಪಳೆಯುಳಿಕೆ ಸ್ಥಿತಿಯಲ್ಲೇ ಇರುವ ಪಚ್ಚಮ್ಮ ಅವರ ಮನೆ   

ಶಿವಮೊಗ್ಗ: ವರ್ಷದ ಹಿಂದೆ ತುಂಗಾ ನದಿ ಪ್ರವಾಹದಿಂದ ಸೂರು ಕಳೆದುಕೊಂಡು ಸಂತ್ರಸ್ತರಾಗಿದ್ದ ಶಿವಮೊಗ್ಗ ನಗರದ ಬಹುತೇಕ ನಾಗರಿಕರು ಇಂದಿಗೂ ಬಯಲಲ್ಲೇ ನಿಕೃಷ್ಟ ಜೀವನ ಸಾಗಿಸುತ್ತಿದ್ದಾರೆ.

ಅಂದು ತುಂಗೆಯ ಪ್ರವಾಹ ನಗರದ ಹಲವು ಬಡಾವಣೆಗಳಿಗೆ ನುಗ್ಗಿತ್ತು. ಹಲವು ದಶಕಗಳ ನಂತರ ಸಂಭವಿಸಿದ ಜಲಪ್ರಳಯಕ್ಕೆ ಮನೆಗಳು ಧರೆಗುರುಳಿದ್ದವು. ಆಗ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಂಪೂರ್ಣ ಮನೆ ಕಳೆದು ಕೊಂಡವರಿಗೆ ₹ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಆದರೆ, ಅದು ಸಾಕಾರಗೊಂಡಿಲ್ಲ. ಸಂತ್ರಸ್ತರು ಬಯಲಲ್ಲೇ ಬದುಕು ಸಾಗಿಸುತ್ತಿದ್ದಾರೆ.

ನಗರ ಪಾಲಿಕೆ ವ್ಯಾಪ್ತಿಯ ಕುಂಬಾರ ಗುಂಡಿ, ಬಿ.ಬಿ. ರಸ್ತೆ, ವಿದ್ಯಾನಗರ, ಚಿಕ್ಕಲ್, ರಾಜೀವ್ ಗಾಂಧಿ ಬಡಾವಣೆ, ಶಾಂತಮ್ಮ ಬಡಾವಣೆ, ಬಾಪೂಜಿನಗರ ಸೇರಿ ವಿವಿಧ ಬಡಾವಣೆಗಳ 1,355 ಮನೆಗಳಿಗೆ ಹಾನಿಯಾಗಿತ್ತು. ಅವುಗಳಲ್ಲಿ 801 ಮನೆಗಳು ಸಂಪೂರ್ಣ ಕುಸಿದಿದ್ದವು. ಅಂದು ತಾತ್ಕಾಲಿಕ ಪರಿ ಹಾರವಾಗಿ ನಗರ ಪಾಲಿಕೆ ₹ 2.55 ಕೋಟಿ ಪರಿಹಾರ ಒದಗಿಸಿತ್ತು. ಸಂಪೂರ್ಣ ಹಾನಿಯಾದ ಮನೆಗಳಿಗೆ ತಲಾ ₹ 5 ಲಕ್ಷ ನೀಡಲು ತಾಲ್ಲೂಕು ಆಡಳಿತಕ್ಕೆ ಜವಾಬ್ದಾರಿ ನೀಡಲಾಗಿತ್ತು.

ADVERTISEMENT

ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಹಣಕಾಸು ಸೌಲಭ್ಯ ಒದಗಿಸಲು ಸೂಚಿಸಲಾಗಿತ್ತು. ಕುಸಿದ ಮನೆಗಳಲ್ಲಿ ಶೇ 10ರಷ್ಟು ಮನೆಗಳೂ ಪೂರ್ಣವಾಗಿಲ್ಲ. ಕೆಲವು ಸಂತ್ರಸ್ತರಿಗೆ ₹ 1 ಲಕ್ಷ, ಕೆಲವರಿಗೆ ₹ 2 ಲಕ್ಷ ಬಂದಿದೆ.ಜಿಲ್ಲೆಯ ಗ್ರಾಮೀಣ ಭಾಗದಲ್ಲೂಸಂಪೂರ್ಣ ಹಾನಿಯಾಗಿದ್ದ 249 ಮನೆಗಳಿಗೆ ₹ 5 ಲಕ್ಷ ಪರಿಹಾರ ದೊರಕಿಲ್ಲ. ಭಾಗಶಃ ಹಾನಿಯಾಗಿದ್ದ 588 ಮನೆಗಳಿಗೆ ತಲಾ ₹ 50 ಸಾವಿರ ಪರಿಹಾರ ನೀಡಲಾಗಿದೆ. ‘ಸಂಪೂರ್ಣ ಮನೆಕಳೆದುಕೊಂಡಿರುವೆ.ಯಾವುದೇ ಪರಿಹಾರ ದೊರೆತಿಲ್ಲ ’ ಎಂದು ಬಾಪೂಜಿ ನಗರದ ವಿಧವೆ ಪಚ್ಚಮ್ಮ ಹೇಳಿದ್ದಾರೆ.

**

ರಾಜೀವ್ ಗಾಂಧಿ ವಸತಿ ನಿಗಮ ಬಿಡುಗಡೆ ಮಾಡಿದಷ್ಟು ಹಣವನ್ನು ಸಂತ್ರಸ್ತರ ಖಾತೆಗೆ ಜಮೆ ಮಾಡಿದ್ದೇವೆ. ಮೂರು ತಿಂಗಳಿನಿಂದ ಯಾವುದೇ ಅನುದಾನ ಬಂದಿಲ್ಲ.
-ಎನ್‌.ಜೆ.ನಾಗರಾಜ್, ತಹಶೀಲ್ದಾರ್, ಶಿವಮೊಗ್ಗ

***

ಮನೆ ಕುಸಿದು ನಾಲ್ಕು ತಿಂಗಳ ನಂತರ ₹ 1 ಲಕ್ಷ ನೀಡಿದ್ದರು. ಮತ್ತೆ ₹ 1 ಲಕ್ಷ ಬ್ಯಾಂಕ್‌ ಖಾತೆಗೆ ಜಮೆ ಆಗಿತ್ತು. ಆ ಹಣದಲ್ಲೇ ಗೋಡೆ ನಿರ್ಮಿಸಿಕೊಂಡಿದ್ದೇವೆ.
-ಶಬ್ಬೀರ್ ಹುಸೇನ್, ಬಾಪೂಜಿ ನಗರ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.