ADVERTISEMENT

ಮಹಾಮಳೆ: ದುಃಸ್ಥಿತಿಯಲ್ಲಿರುವ ದೋಣಿಯೇ ಆಸರೆ!

ಪ್ರಾಣ ಉಳಿಸಿಕೊಳ್ಳಲು ಜೀವ ಕೈಯಲ್ಲಿ ಹಿಡಿದುಕೊಂಡು ಬರಬೇಕು

ಎಂ.ಮಹೇಶ
Published 7 ಆಗಸ್ಟ್ 2019, 8:55 IST
Last Updated 7 ಆಗಸ್ಟ್ 2019, 8:55 IST
ಅಥಣಿ ತಾಲ್ಲೂಕಿನ ನಂದಿಇಂಗಳಗಾಂವದಿಂದ ಪೇರಲ ತೋಟಕ್ಕೆ ಜನರನ್ನು ಸಾಗಿಸಲು ದುಃಸ್ಥಿತಿಯಲ್ಲಿರುವ ದೋಣಿ ಬಳಸಲಾಯಿತುಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಅಥಣಿ ತಾಲ್ಲೂಕಿನ ನಂದಿಇಂಗಳಗಾಂವದಿಂದ ಪೇರಲ ತೋಟಕ್ಕೆ ಜನರನ್ನು ಸಾಗಿಸಲು ದುಃಸ್ಥಿತಿಯಲ್ಲಿರುವ ದೋಣಿ ಬಳಸಲಾಯಿತುಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಅಥಣಿ (ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಜಲಾವೃತಗೊಂಡಿರುವ ತಾಲ್ಲೂಕಿನ ವಿವಿಧ ಗ್ರಾಮ ಹಾಗೂ ತೋಟಗಳಲ್ಲಿನ ಜನರನ್ನು ಸ್ಥಳಾಂತರಿಸಲು, ದುಃಸ್ಥಿತಿಯಲ್ಲಿರುವ ಹಳೆಯ ಮರದ ದೋಣಿಗಳನ್ನು ಬಳಸಲಾಗುತ್ತಿದೆ.

ನದಿ ಇಂಗಳಗಾಂವ, ತೀರ್ಥ, ದರೂರ, ಸಪ್ತಸಾಗರ, ಹುಲಗಬಾಳಿ, ಹಳ್ಯಾಳ, ಅವರಕೋಡ, ನಾಗನೂರ ಪಿ.ಕೆ., ದೊಡ್ಡವಾಡ, ಹಿಪ್ಪರಗಿ ಬ್ಯಾರೇಜ್‌ನ ಕೆಳ ಭಾಗದಲ್ಲಿರುವ ಸವದಿ, ಶಿರಹಟ್ಟಿ, ಜುಂಜರವಾಡ ಗ್ರಾಮಗಳು ನಡುಗಡ್ಡೆಗಳಾಗಿವೆ. ಅಲ್ಲಿದ್ದ ನೂರಾರು ಕುಟುಂಬಗಳು ಹಾಗೂ ಜಾನುವಾರುಗಳನ್ನು ದೋಣಿಯಲ್ಲಿಯೇ ಸಾಗಿಸಲಾಗುತ್ತಿದೆ. ಕಬ್ಬಿನ ಗದ್ದೆಗಳ ನಡುವೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಾ, ರಭಸದಿಂದ ಹರಿಯುತ್ತಿರುವ ನೀರಿನಲ್ಲಿ ಸಾಗುವ ದೋಣಿಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಹೊರಬರಬೇಕಾದ ಸ್ಥಿತಿ ‘ಪ್ರಜಾವಾಣಿ’ ಪ‍್ರತಿನಿಧಿ ಅಲ್ಲಿಗೆ ಭೇಟಿ ನೀಡಿದಾಗ ಕಂಡುಬಂತು.

ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಜನರು ಅನಿವಾರ್ಯವಾಗಿ ಈ ದೋಣಿಗಳಲ್ಲೇ ತೆರಳುತ್ತಿದ್ದಾರೆ. ತಾಲ್ಲೂಕು ಆಡಳಿತ ಇಂದಿಗೂ ಅತ್ಯಾಧುನಿಕ ಅಥವಾ ಸುರಕ್ಷಿತವಾದ ಬೋಟ್‌ಗಳ ವ್ಯವಸ್ಥೆ ಮಾಡಿಲ್ಲ. 2005ರಲ್ಲಿ ಇಲ್ಲಿ ಕೃಷ್ಣಾ ನದಿಯಲ್ಲಿ ಮಹಾಪೂರ ಬಂದಿತ್ತು. ಆಗ, ತರಿಸಲಾಗಿದ್ದ ದೋಣಿಗಳನ್ನೇ ಇಂದಿಗೂ ಇಟ್ಟುಕೊಳ್ಳಲಾಗಿದೆ.

ADVERTISEMENT

ರಂದ್ರಗಳೂ ಆಗಿವೆ:

‘40 ಮಂದಿ ಕರೆದೊಯ್ಯಬಹುದಾದ ಸಾಮರ್ಥ್ಯವಿರುವ ದೋಣಿ ಇದು. ಆದರೆ, ದುಃಸ್ಥಿತಿಯಲ್ಲಿರುವುದರಿಂದ ಒಮ್ಮೆಗೆ 15– 20 ಜನರನ್ನಷ್ಟೇ ಸಾಗಿಸಲು ಸಾಧ್ಯವಾಗುತ್ತಿದೆ. ಗ್ರಾಮದಲ್ಲಿರುವ 1,500ಕ್ಕೂ ಹೆಚ್ಚು ಜನರನ್ನು ಸಂಪೂರ್ಣವಾಗಿ ಸ್ಥಳಾಂತರಿಸುವುದು ಯಾವಾಗ? ದೋಣಿಯ ಅಲ್ಲಲ್ಲಿ ರಂದ್ರಗಳಾಗಿದ್ದು, ನೀರು ನುಗ್ಗುತ್ತಿರುತ್ತದೆ’ ಎಂದು ದೋಣಿಯಲ್ಲಿ ಹೋಗುತ್ತಿದ್ದ ನದಿಇಂಗಳಗಾಂವದ ತಮ್ಮಣ್ಣ ಸಾಂವಗಾಂವ ಆತಂಕ ವ್ಯಕ್ತಪಡಿಸಿದರು.

‘ಪ್ರತಿ ವರ್ಷವೂ ನೆರೆಯ ಆತಂಕ ಇದ್ದೇ ಇರುತ್ತದೆ. ಹೀಗಾಗಿ, ನಮಗೆ ಪುನರ್ವಸತಿ ಕಲ್ಪಿಸಿದರೆ ಹೋಗಲು ಸಿದ್ಧರಿದ್ದೇವೆ. ಆದರೆ, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ದೋಣಿ ಹಾಳಾಗಿರುವುದರಿಂದ ಕಡಿಮೆ ಸಂಖ್ಯೆಯ ಜನರನ್ನಷ್ಟೇ ಕರೆದುಕೊಂಡು ಹೋಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ಜನರು ಇನ್ನೊಂದು ಸುತ್ತು ಬರುವವರೆಗೆ ಕಾಯಲೇಬೇಕು’ ಎಂದು ಅಂಬಿಗರು ತಿಳಿಸುತ್ತಾರೆ. ಆ ದೋಣಿ ಇನ್ನೊಂದು ತುದಿಗೆ ಹೋಗಲು ಅರ್ಧ ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತಿತ್ತು.

ನೆರವಾದ ಜನ:

ಇಬ್ಬರು ಅಂಬಿಗರಿಂದ ದೋಣಿ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಜನರೇ ಹರಿಗೋಲನ್ನು ನಡೆಸಬೇಕು. ಕೊಂಚ ಎಚ್ಚರ ತಪ‍್ಪಿದರೂ ದೋಣಿ ಕಬ್ಬಿನ ಗದ್ದೆಯಲ್ಲಿ ಸಿಲುಕಬಹುದಾದ ಹಾಗೂ ಕೃಷ್ಣೆಯಲ್ಲಿ ನೀರು ಪಾಲಾಗಬಹುದಾದ ಆತಂಕದ ವಾತಾವರಣ ಇದೆ.

ಕೆಲವು ತಿಂಗಳ ಹಿಂದಷ್ಟೇ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿತ್ತು. ಆಗ, ಕೊಯ್ನಾ ಜಲಾಶಯದಿಂದ ನೀರು ಹರಿಸುವಂತೆ ತಾಲ್ಲೂಕಿನ ಜನರು ಹೋರಾಟ ನಡೆಸಿದ್ದರು. ಆದರೆ, ಈಗ ಅಲ್ಲಿಂದ ಬರುತ್ತಿರುವ ನೀರಿನ ಪ್ರಮಾಣವನ್ನು ಕೇಳಿದರೆ ಬೆವರುತ್ತಿದ್ದಾರೆ. ಕಷ್ಟಪಟ್ಟು ಬೆಳೆದ ಕಬ್ಬು ನೀರಿನಲ್ಲಿ ಮುಳುಗಿ ಹೋಗಿರುವುದನ್ನು ಕಂಡು ಮರುಗುತ್ತಲೇ ಊರಿನಿಂದ ಸಾಮಗ್ರಿಗಳೊಂದಿಗೆ ತೆರಳುತ್ತಿದ್ದಾರೆ. ಕೆಲವರು ನೆಂಟರಿಷ್ಟರ ಮನೆಗಳಿಗೆ ಹೋದರೆ, ಇನ್ನು ಕೆಲವರು ಊರಿನಲ್ಲಿರುವ ಮನೆಗಳಿಗೆ ಹೋಗುತ್ತಿದ್ದಾರೆ. ಕೆಲವರು ಗಂಜಿ ಕೇಂದ್ರದಲ್ಲಿ ಉಳಿದುಕೊಂಡಿದ್ದಾರೆ.

ಸತ್ತಿ, ನಂದೇಶ್ವರ, ಜನವಾಡ ಗ್ರಾಮಗಳಿಗೆ ಬೋಟ್ ಒದಗಿಸಬೇಕು ಎನ್ನುವ ಬೇಡಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.