ADVERTISEMENT

ಕೋವಿಡ್: ರಾಜ್ಯದ ಶೇ 75.38ರಷ್ಟು ಮಕ್ಕಳಲ್ಲಿ ಪ್ರತಿಕಾಯ ವೃದ್ಧಿ– ಸೆರೋ ಸಮೀಕ್ಷೆ

6ರಿಂದ 14 ವರ್ಷದೊಳಗಿನವರ ಸೆರೋ ಸಮೀಕ್ಷೆಯಿಂದ ದೃಢ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 16:06 IST
Last Updated 8 ಸೆಪ್ಟೆಂಬರ್ 2022, 16:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಮಕ್ಕಳ ಮೇಲೆ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಿದ್ದು,6ರಿಂದ 14 ವರ್ಷದವರಲ್ಲಿ ಶೇ 75.38ರಷ್ಟು ಮಕ್ಕಳಲ್ಲಿ ‘ಇಮ್ಯುನೊಗ್ಲೋಬ್ಯುಲಿನ್ ಜಿ’ (ಐಜಿಜಿ) ಪ್ರತಿಕಾಯ ವೃದ್ಧಿಯಾಗಿದೆ ಎನ್ನುವುದು ಸೆರೋ ಸಮೀಕ್ಷೆಯಿಂದ ದೃಢಪಟ್ಟಿದೆ.

ಆರೋಗ್ಯ ಇಲಾಖೆ ಜೂನ್‌ನಲ್ಲಿ ಈ ಸಮೀಕ್ಷೆ ನಡೆಸಿದೆ.6–14 ವರ್ಷದ ಮಕ್ಕಳು ಲಸಿಕಾ ಅಭಿಯಾನದಿಂದ ಹೊರಗುಳಿದಿದ್ದರಿಂದ ಅವರಲ್ಲಿ ಸೋಂಕಿನ ತೀವ್ರತೆ ಹಾಗೂ ಪರಿಣಾಮದ ಬಗ್ಗೆ ತಿಳಿಯುವುದು ಸಮೀಕ್ಷೆಯ ಉದ್ದೇಶವಾಗಿತ್ತು.ಇಲಾಖೆಯುಈ ಸಮೀಕ್ಷೆಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ 5,358 ಮಕ್ಕಳ ಗಂಟಲ ದ್ರವದ ಮಾದರಿಗಳನ್ನು ಸಂಗ್ರಹಿಸಿತ್ತು. ಸಮೀಕ್ಷೆಗೆ ಒಳಪಟ್ಟ ಹೆಚ್ಚಿನ ಮಕ್ಕಳಲ್ಲಿ ಪ್ರತಿಕಾಯ ವೃದ್ಧಿಯಾಗಿದೆ. ಆದ್ದರಿಂದ ಕೊರೊನಾ ಸೋಂಕು ಅರಿವಿಗೆ ಬಾರದೆ ದೇಹ ಪ್ರವೇಶಿಸಿ, ಮರೆಯಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಸಮೀಕ್ಷೆಗೆ ಒಳಗಾದವರಲ್ಲಿ 2,726 ಗಂಡು ಹಾಗೂ 2,632 ಹೆಣ್ಣು ಮಕ್ಕಳಾಗಿದ್ದಾರೆ. ಇವರಲ್ಲಿ 6-8 ವರ್ಷ, 9–11 ವರ್ಷ ಹಾಗೂ 12-14 ವರ್ಷ ಎಂದು ಮೂರು ಗುಂಪುಗಳಾಗಿ ವಿಂಗಡಿಸಿ, ಭೌಗೋಳಿಕವಾಗಿಯೂ ನಗರ ಪ್ರದೇಶ, ಕೊಳಚೆ ಪ್ರದೇಶ ಮತ್ತು ಗ್ರಾಮೀಣ ಪ್ರದೇಶ ಎಂದು ವರ್ಗೀಕರಿಸಿ ಅಧ್ಯಯನ ನಡೆಸಲಾಗಿತ್ತು.

ADVERTISEMENT

709 ಮಕ್ಕಳಿಗೆ ಲಕ್ಷಣ:ಸಮೀಕ್ಷೆಗೆ ಒಳಗಾಗಿದ್ದ ಮಕ್ಕಳಲ್ಲಿ 709 (ಶೇ 13.23 ರಷ್ಟು) ಮಕ್ಕಳಿಗೆ ರೋಗ ಲಕ್ಷಣಗಳಿದ್ದವು. ಆದರೆ, ಇವರಿಗೆ ನಡೆಸಲಾದ ಕೋವಿಡ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿರಲಿಲ್ಲ. ಹಾಗಾಗಿ, ಈ ಮಕ್ಕಳಿಗೆ ಬೆಂಗಳೂರಿನ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ (ಎನ್‌ಐವಿ) ಸಾರಿ (ತೀವ್ರ ಉಸಿರಾಟದ ಸಮಸ್ಯೆ) ಹಾಗೂ ಐಎಲ್‌ಐ (ಶೀತ ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ), ಎಚ್1 ಎನ್1, ಎಚ್3 ಎನ್2, ಆರ್‌ಎಸ್‌ವಿ ಎ ಮತ್ತು ಆರ್‌ಎಸ್‌ವಿ ಬಿ ಸೇರಿ ಇತರೆ ಪರೀಕ್ಷೆಗಳನ್ನು ನಡೆಸಲಾಗಿತ್ತು. ವರದಿ ಆಧರಿಸಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸಮೀಕ್ಷೆಗೆಒಳಪಟ್ಟ ಮಕ್ಕಳಲ್ಲಿ 57 ಮಕ್ಕಳ ಮಾದರಿಗಳನ್ನು ತಿರಸ್ಕರಿಸಲಾಗಿತ್ತು. 23 ಮಾದರಿಗಳ ಫಲಿತಾಂಶ ನಿರ್ಣಾಯಕವಾಗಿರಲಿಲ್ಲ. ಅಂತಿಮವಾಗಿ 5,278 ಮಾದರಿಗಳನ್ನು ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಯಿತು. ಉಡುಪಿ ಹಾಗೂ ಚಿತ್ರದುರ್ಗದ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿತ್ತು. ಇದರಲ್ಲಿ ರೋಗ ಲಕ್ಷಣ ಹೊಂದಿದ್ದ ಮಗುವಿಗೆ ಬಿಎ.5 ಓಮೈಕ್ರಾನ್ ತಳಿ ಪತ್ತೆಯಾಗಿತ್ತು. ರೋಗ ಲಕ್ಷಣ ಇಲ್ಲದ ಮಗುವಿಗೆ ಬಿಎ.2.10 ಓಮೈಕ್ರಾನ್ ತಳಿ ದೃಢಪಟ್ಟಿತ್ತು ಎಂದು ಇಲಾಖೆ ಹೇಳಿದೆ.

ಅಧಿಕ ಪ್ರತಿಕಾಯ ಪಡೆದ ಮಕ್ಕಳಿರುವ ಜಿಲ್ಲೆಗಳು

ಜಿಲ್ಲೆ; ಮಾದರಿಗಳು; ಪ್ರತಿಕಾಯ (%)

ಚಿಕ್ಕಮಗಳೂರು; 72; 100

ಬಾಗಲಕೋಟೆ; 177;91.12

ಉತ್ತರ ಕನ್ನಡ; 102; 89.61

ಗದಗ; 91; 88.62

ಬಿಬಿಎಂಪಿ; 781; 86.88

ಕಡಿಮೆ ಪ್ರತಿಕಾಯ ಇರುವ ಮಕ್ಕಳಿರುವ ಜಿಲ್ಲೆಗಳು

ಜಿಲ್ಲೆ; ಮಾದರಿಗಳು; ಪ್ರತಿಕಾಯ (%)

ಕಲಬುರ್ಗಿ; 276; 43.24

ಯಾದಗಿರಿ; 145; 48.20

ಉಡುಪಿ; 74; 52.31

ಹಾವೇರಿ; 132; 59.47

ರಾಮನಗರ; 72; 62.72.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.