ADVERTISEMENT

ಅಡಿಕೆ ಸಿಂಗಾರಕ್ಕೆ ರಾಸಾಯನಿಕ ಕೀಟನಾಶಕ: ಮಲೆನಾಡಲಿ ಜೇನು ನೊಣಗಳ ಸಾವಿನ ಮೆರವಣಿಗೆ

ಶಿವಾನಂದ ಕರ್ಕಿ
Published 16 ಫೆಬ್ರುವರಿ 2020, 3:59 IST
Last Updated 16 ಫೆಬ್ರುವರಿ 2020, 3:59 IST
ಮಲೆನಾಡಿನಲ್ಲಿ ರಾಸಾಯನಿಕ ಕೀಟನಾಶಕ್ಕೆ ಬಲಿಯಾದ ಜೇನು ನೊಣಗಳು
ಮಲೆನಾಡಿನಲ್ಲಿ ರಾಸಾಯನಿಕ ಕೀಟನಾಶಕ್ಕೆ ಬಲಿಯಾದ ಜೇನು ನೊಣಗಳು   

ತೀರ್ಥಹಳ್ಳಿ: ಮಲೆನಾಡಿನಲ್ಲಿ ಅಡಿಕೆ ಸಿಂಗಾರಕ್ಕೆ ರಾಸಾಯನಿಕ ಕೀಟನಾಶಕ ಸಿಂಪಡಿಸುತ್ತಿರುವುದರಿಂದ ಜೇನು ನೊಣಗಳು ಸಾಯುತ್ತಿದ್ದು, ಜೇನು ಸಂತತಿಗೆ ಕೀಟನಾಶಕ ಶಾಪವಾಗಿ ಪರಿಣಮಿಸಿದೆ.

ಒಂದೆರಡು ತಿಂಗಳಿನಿಂದ ಮಲೆನಾಡು ಭಾಗದ ಅಡಿಕೆ ತೋಟಗಳ ಸಿಂಗಾರದಲ್ಲಿ ಕಾಣಿಸಿಕೊಂಡಿರುವ ಕೀಟಗಳ ನಿಯಂತ್ರಣಕ್ಕೆ ಸಿಂಪಡಿಸುತ್ತಿರುವ ಕೀಟನಾಶಕ ಲೆಕ್ಕವಿಲ್ಲದಷ್ಟು ಜೇನು ನೊಣಗಳನ್ನು ಬಲಿ ಪಡೆದಿದೆ.

ಸಿಂಗಾರ ಒಡೆಯುತ್ತಿದ್ದಂತೆ ಘಮ–ಘಮಿಸುವ ಎಸಳು ಹೂವಿನ ಮಕರಂದ ಹೀರಲು ದಂಡು ದಂಡಾಗಿ ಅಡಿಕೆ ತೋಟಗಳಿಗೆ ಮುತ್ತುವ ಜೇನು ನೊಣಗಳು ಈಗ ಎಲ್ಲೆಂದರಲ್ಲಿ ಜೀವ ಬಿಡುತ್ತಿವೆ.

ADVERTISEMENT

ಅಡಿಕೆಯಲ್ಲಿ ಹಿಂಗಾರ ಒಣಗು ರೋಗವು ಜನವರಿ-ಮಾರ್ಚ್ ತಿಂಗಳಿನಲ್ಲಿ ಕಾಣಿಸಿಕೊಳ್ಳುತ್ತದೆ. ಹಿಂಗಾರು ಕೊಲ್ಲೆಟೋಟ್ರೈಕಂ ಗ್ಲಿಯೋಸ್ಟೋರಿಯಾಯ್ಡಿಸ್ ಎಂಬ ಶಿಲೀಂದ್ರದ ಸೋಂಕಿಗೆ ಒಳಗಾದಾಗ ಈ ರೋಗ ಕಂಡು ಬರುತ್ತದೆ. ಇದೇ ಮೊದಲ ಬಾರಿಗೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಿಂಗಾರ ತಿನ್ನುವ ಹುಳ ಅಡಿಕೆ ಬೆಳೆಯಲ್ಲಿ ಕಂಡು ಬಂದಿದೆ. ಅಡಿಕೆ ಬೆಳೆಯುವ ಪ್ರದೇಶಗಳಿಗೆಈ ಕೀಟ ವೇಗವಾಗಿ ಹರಡುತ್ತಿದೆ.

ಹಿಂಗಾರದ ಎಸಳುಗಳನ್ನು ಕೆರೆದು ತಿನ್ನುತ್ತದೆ ಹಾಗೂ ಅದರ ಹಿಕ್ಕೆಯಿಂದ ಗೂಡುಕಟ್ಟಿಕೊಂಡು ಅದರಲ್ಲೇ ಜೀವಿಸುತ್ತದೆ. ನಂತರ ಪೆಂಟಾಟೋವಿಡ್ ತಿಗಣೆ ಬಾಧೆ ಹೆಚ್ಚಾಗಿ ಅಡಿಕೆ ಬೆಳೆಯಲ್ಲಿ ಕಂಡುಬರುತ್ತದೆ. ರೋಗ ಹಾಗೂ ಕೀಟಗಳಿಂದ ಬೆಳೆ
ಉಳಿಸಿಕೊಳ್ಳಲು ಬೆಂಗಳೂರಿನ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿಫಾರಸು ಮಾಡಿದ ಔಷಧ ಸಿಂಪಡಿಸುವಂತೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಪ್ರಕಟಣೆ ನೀಡಿತ್ತು.

ರೋಗ ಕಂಡು ಬಂದ ಅಡಿಕೆ ತೋಟಗಳಿಗೆ ರೈತರು ಕ್ಲೋರೋಪೈರಿಫಸ್ ಕೀಟನಾಶಕವನ್ನು ಸಿಂಪಡಣೆ ಮಾಡಲು ಮುಂದಾಗಿದ್ದರು. ಕೀಟನಾಶಕ ಸಿಂಪಡಣೆ ಮಾಡಿದ ತೋಟಗಳಲ್ಲಿ ಜೇನು ನೊಣಗಳು ಹಿಂಡು ಹಿಂಡಾಗಿ ಸಾವಿಗೀಡಾಗುತ್ತಿವೆ. ಜನವರಿಯಿಂದ ಹಿಂಗಾರಗಳು ಬಿಚ್ಚುವುದರಿಂದ ಜೇನು ನೊಣಗಳು ಹೆಚ್ಚಾಗಿ ಅಡಿಕೆ ತೋಟವನ್ನು ಆಶ್ರಯಿಸುತ್ತವೆ. ಸರ್ವ ಋತು ಹೂವುಗಳು ಈಗ ಪಶ್ಚಿಮಘಟ್ಟ ಸಾಲಿನ ತಪ್ಪಲಿನಲ್ಲಿ ಕ್ಷೀಣಿಸಿರುವುದರಿಂದ ಅಡಿಕೆ ತೋಟ ಜೇನು ನೊಣಗಳಿಗೆ ಸುಲಭವಾಗಿ ಸಿಗುತ್ತವೆ. ಮಲೆನಾಡಿನ ಕಾಡನ್ನು ನಾಶಪಡಿಸಿ ಏಕ ಜಾತಿಯ ಅಕೇಶಿಯಾನೆಡತೋಪು ನಿರ್ಮಾಣವಾದ ನಂತರ ಜೇನು ತಳಿಗಳ ಸಂಖ್ಯೆ ಗಣನೀಯವಾಗಿ
ಕ್ಷೀಣಿಸಿದೆ ಎಂದು ಹಿರಿಯರು ಅಭಿಪ್ರಾಯಪಡುತ್ತಾರೆ.

‘ದೊಡ್ಡ ಮರಗಳನ್ನು ಆಶ್ರಯಿಸುವ ಹೆಜ್ಜೇನು, ಹುತ್ತಗಳಲ್ಲಿ ಆಶ್ರಯ ಪಡೆಯುವ ತುಡುವೆ, ಸಣ್ಣಗಿಡಗಂಟಿಗಳಲ್ಲಿ ಗೂಡು ಕಟ್ಟುವಕೋಲು ಜೇನು ಸೇರಿ ಮರಗಳ ಪೊಟರೆಯಲ್ಲಿನ ನಸರಿ (ಕಿರುಜೇನು)ಗಳ ಸಂಖ್ಯೆ ಈಗ ಕಡಿಮೆಯಾಗಿದೆ. ಜೇನು ಸಾಕಾಣಿಕೆಗೆ ಸರ್ಕಾರ
ಪ್ರೋತ್ಸಾಹ ನೀಡುತ್ತಿದೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮಲೆನಾಡಿನಲ್ಲಿ ಜನ ಜೇನು ಕೃಷಿಯಲ್ಲಿ ತೊಡಗಿಲ್ಲ’ ಎಂದು ಕೃಷಿಕ ನೆಂಪೆ ದೇವರಾಜ್ ಹೇಳಿದರು.

*
ಫಸಲು ಉಳಿಸಿಕೊಳ್ಳಲು ಔಷಧ ಸಿಂಪಡಣೆ ಅನಿವಾರ್ಯ. ಔಷಧ ಸಿಂಪಡಣೆಯಿಂದ ಒಂದಷ್ಟು ಜೇನು ನೊಣಗಳಿಗೆ ಧಕ್ಕೆಯಾಗಬಹುದು. ಜೇನು ಸಂತತಿ ವೃದ್ಧಿಗೆ ಔಷಧ ಸಿಂಪಡಣೆ ಬಹಳ ತೊಂದರೆ ನೀಡುವುದಿಲ್ಲ.
-ಡಾ.ಎಂ. ರವಿಕುಮಾರ್, ಮುಖ್ಯಸ್ಥ, ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ತೀರ್ಥಹಳ್ಳಿ

*
ಕೀಟಬಾಧೆ ರೋಗ ಹೊಸತಲ್ಲ. ಇದಕ್ಕೆ ರಾಸಾಯನಿಕ ಕೀಟನಾಶಕ ಉತ್ತರವಲ್ಲ. ಶಿಲೀಂದ್ರ ರೋಗಕ್ಕೆ ಕಾಪರ್ ಆಕ್ಟಿಕ್ಲೋರೈಡ್, ಬೇವಿನೆಣ್ಣೆ ಹೂವಿಗೆ ಸಿಂಪಡಣೆ ಮಾಡಬಹುದು. ಅಗ ಜೇನಿಗೆ ಹಾನಿಯಾಗುವುದಿಲ್ಲ.
-ಟಿ. ಸಿದ್ದಲಿಂಗೇಶ್ವರ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.