ADVERTISEMENT

ಅನಾಥರಿಗೆ ಗೌರವಯುತ ಅಂತಿಮ ವಿದಾಯ

ಮಂಗಳೂರು ಪಾಲಿಕೆ ಸದಸ್ಯ ಗಣೇಶ್ ಕುಲಾಲರ ಮಾನವೀಯ ಕಾರ್ಯ

​ಪ್ರಜಾವಾಣಿ ವಾರ್ತೆ
Published 4 ಮೇ 2021, 12:57 IST
Last Updated 4 ಮೇ 2021, 12:57 IST
ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಗಣೇಶ್ ಕುಲಾಲ್ ಅನಾಥ ಶವದ ಸಂಸ್ಕಾರ ನಡೆಸುತ್ತಿರುವುದು
ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಗಣೇಶ್ ಕುಲಾಲ್ ಅನಾಥ ಶವದ ಸಂಸ್ಕಾರ ನಡೆಸುತ್ತಿರುವುದು   

ಮಂಗಳೂರು: ಕೋವಿಡ್ ಸೋಂಕಿತರ ಮೃತದೇಹದ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರೇ ಹಿಂದೇಟು ಹಾಕುವ ಇಂದಿನ ಸಂದರ್ಭದಲ್ಲಿ, ಇಲ್ಲಿನ ಮಹಾನಗರ ಪಾಲಿಕೆಯ ಸದಸ್ಯರೊಬ್ಬರು, ಅನಾಥ ಶವಗಳಿಗೆ ಗೌರವಯುತವಾಗಿ ಅಂತಿಮ ವಿಧಿ ನೆರವೇರಿಸುವ ಮಾನವೀಯ ಕಾರ್ಯ ಮಾಡುತ್ತಿದ್ದಾರೆ.

ಮಹಾನಗರ ಪಾಲಿಕೆಯ 26ನೇ ವಾರ್ಡ್ ಸದಸ್ಯ ಗಣೇಶ್ ಕುಲಾಲ್ ಅವರು, ಎರಡು ವಾರಗಳಲ್ಲಿ ಸುಮಾರು 12 ಶವಗಳ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಅವುಗಳಲ್ಲಿ ಅರ್ಧದಷ್ಟು ವಾರಸುದಾರರಿಲ್ಲದ ಅನಾಥ ಶವಗಳಾಗಿದ್ದವು.

‘ಕಳೆದ 25 ವರ್ಷಗಳಿಂದ ಈ ಕಾರ್ಯದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಈವರೆಗೆ 750ಕ್ಕೂ ಹೆಚ್ಚು ಶವ ಸಂಸ್ಕಾರದಲ್ಲಿ ಭಾಗವಹಿಸಿದ್ದೇನೆ. ಅವುಗಳಲ್ಲಿ 50ಕ್ಕೂ ಹೆಚ್ಚು ಅನಾಥ ಶವಗಳ ಅಂತಿಮ ವಿಧಿಯನ್ನು ನೆರವೇರಿಸಿದ್ದೇನೆ. ಕೆಲವೊಮ್ಮೆ ಆಂಬುಲೆನ್ಸ್ ವೆಚ್ಚವನ್ನೂ ಭರಿಸಿ, ಸ್ವಂತ ಖರ್ಚಿನಲ್ಲಿ ಎಲ್ಲವನ್ನೂ ನಿಭಾಯಿಸಬೇಕಾದ ಸಂದರ್ಭ ಬರುತ್ತದೆ’ ಎನ್ನುತ್ತಾರೆ ಗಣೇಶ್ ಕುಲಾಲ್.

ADVERTISEMENT

‘ಸ್ಥಳೀಯವಾಗಿ ಯಾರು ಮೃತಪಟ್ಟರೂ ಬಹುತೇಕ ಸಂದರ್ಭಗಳಲ್ಲಿ ನನಗೆ ಕರೆ ಬರುತ್ತದೆ. ಎಲ್ಲ ವಿಧಿಗಳು ಪೂರ್ಣಗೊಳ್ಳುವ ತನಕ ಇದ್ದು, ಆ ಮನೆಯವರಿಗೆ ಒಂದಿಷ್ಟು ಸಾಂತ್ವನ ಹೇಳಿ, ಶೋಕದ ಮನೆಯಲ್ಲಿ, ಕಿರುನಗೆ ಮೂಡುವಂತಹ ಮಾತನಾಡಿ ಬರುವುದು ನನ್ನ ಜ್ಯಾಯಮಾನ. ಪಾಲಕರು ಮಾಡಿದ ಪುಣ್ಯ, ಈ ಕೆಲಸಕ್ಕೆ ನನ್ನನ್ನು ಪ್ರೇರೇಪಿಸಿದೆ. ಅನಾಯಾಸವಾಗಿ ಕಾರ್ಪೊರೇಟರ್ ಸ್ಥಾನವೂ ನನಗೆ ದೊರೆತಿದೆ’ ಎನ್ನುವಾಗ ಅವರಿಗೆ ಸಂತೃಪ್ತ ಭಾವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.