ADVERTISEMENT

ಧರ್ಮಸ್ಥಳ: ಲಕ್ಷ ದೀಪೋತ್ಸವಕ್ಕೆ ಸಾಕ್ಷಿ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 15:47 IST
Last Updated 7 ಡಿಸೆಂಬರ್ 2018, 15:47 IST
ಧರ್ಮಸ್ಥಳದಲ್ಲಿ ಶುಕ್ರವಾರ ನಡೆದ ಲಕ್ಷ ದೀಪೊತ್ಸವಕ್ಕೆ ಸಾಕ್ಷಿಯಾದ ಭಕ್ತರು.
ಧರ್ಮಸ್ಥಳದಲ್ಲಿ ಶುಕ್ರವಾರ ನಡೆದ ಲಕ್ಷ ದೀಪೊತ್ಸವಕ್ಕೆ ಸಾಕ್ಷಿಯಾದ ಭಕ್ತರು.   

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಶ್ರೀ ಮಂಜುನಾಥ ಸ್ವಾಮಿ ಲಕ್ಷ ದೀಪೋತ್ಸವ ನಡೆಯಿತು.

ದೇವಸ್ಥಾನದ ಒಳಗಡೆ ದೇವರ ಮೂರ್ತಿಯನ್ನು ಹೊತ್ತು ಗರ್ಭಗುಡಿಗೆ ಎರಡು ಸುತ್ತು ಹಾಗೂ ಹೊರಗೆ ನಾಲ್ಕು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಕ್ಷೇತ್ರಪಾಲ ಪೂಜೆ ನಡೆಯಿತು.

ನಂತರ ಗರ್ಭಗುಡಿ ಒಳಗೆ ಒಂದು ಸುತ್ತು ಪ್ರದಕ್ಷಿಣೆ ಬಂದು ಹೊರಗಿನ ಪ್ರಾಂಗಣದಲ್ಲಿ ಶಂಖ, ಕೊಳಲು, ಚೆಂಡೆ ವಾದನ, ನಾಗಸ್ವರ ಇತ್ಯಾದಿ ಸಂಗೀತ ಸೇವೆಯೊದಿಗೆ ಒಂಬತ್ತು ಸುತ್ತು ಪ್ರದಕ್ಷಿಣೆ ನಡೆಯಿತು.

ADVERTISEMENT

ಬಳಿಕ ಬೆಳ್ಳಿ ರಥದಲ್ಲಿ ಶ್ರೀ ಸ್ವಾಮಿಯ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಗೌರಿಮಾರು ಕಟ್ಟೆಗೆ ಕೊಂಡುಹೋಗಿ ಅಲ್ಲಿ ಅಷ್ಟಾವಧಾನ ಪೂಜೆ ನಡೆಯಿತು. ನಂತರ ಭವ್ಯ ಮೆರವಣಿಗೆಯಲ್ಲಿ ದೇವರ ಮೂರ್ತಿಯನ್ನು ದೇವಸ್ಥಾನಕ್ಕೆ ತರಲಾಯಿತು. ನಾಡಿನೆಲ್ಲೆಡೆಯಿಂದ ಬಂದ ಲಕ್ಷಾಂತರ ಮಂದಿ ಭಕ್ತಾದಿಗಳು ದೀಪೋತ್ಸವ ವೀಕ್ಷಿಸಿ ಧನ್ಯತೆಯನ್ನು ಹೊಂದಿದರು. 648 ಕಲಾ ತಂಡಗಳ 3,200 ಮಂದಿ ಕಲಾವಿದರು ವಾಲಗ, ಶಂಖ, ತಾಳ, ಜಾಗಟೆ, ಚೆಂಡೆ ವಾದನದ ಮೂಲಕ ಕಲಾ ಸೇವೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.