ADVERTISEMENT

ಹುಲಿಗಣತಿಗೆ ಸಕಲ ಸಿದ್ಧತೆ

ಬಂಡೀಪುರದಲ್ಲಿ ಇಂದಿನಿಂದ, ನಾಗರಹೊಳೆಯಲ್ಲಿ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 19:22 IST
Last Updated 21 ಜನವರಿ 2022, 19:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಚಾಮರಾಜನಗರ/ ಮೈಸೂರು: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ದೇಶದಾದ್ಯಂತ ನಡೆಸಲಿರುವ ಹುಲಿಗಣತಿ ಕಾರ್ಯಕ್ಕೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲೂ ಸಕಲ ಸಿದ್ಧತೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಶನಿವಾರದಿಂದ (ಜ.22) ಗಣತಿ ಆರಂಭವಾಗಲಿದ್ದು, ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೇ 27ರಿಂದ ಶುರುವಾಗಲಿದೆ. ಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಜ.23 ರಿಂದ ಗಣತಿ ನಡೆಯಲಿದೆ.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಗಣತಿ ನಡೆಯುತ್ತದೆ. 2018ರ ಗಣತಿ ಪ್ರಕಾರ, ಬಂಡೀಪುರದಲ್ಲಿ 173 ಹುಲಿಗಳಿವೆ. ಬಿಆರ್‌ಟಿಯಲ್ಲಿ 52ರಿಂದ 80ರವರೆಗೂ ಹುಲಿಗಳಿವೆ ಎಂದು ವರದಿ ಹೇಳಿದೆ.

ADVERTISEMENT

‘ಈ ಬಾರಿ ಕೋವಿಡ್ ಭೀತಿಯಿಂದ ಸ್ವಯಂಸೇವಕರು ಭಾಗವಹಿಸುತ್ತಿಲ್ಲ, ಇಲಾಖೆಯ 300 ಸಿಬ್ಬಂದಿ ಭಾಗವಹಿಸುತ್ತಾರೆ. ಫೆ.8ರವರೆಗೆ ಮೂರು ಹಂತಗಳಲ್ಲಿ ಗಣತಿ ನಡೆಯಲಿದೆ’ ಎಂದು ಬಂಡೀಪುರ ಹುಲಿ ಯೋಜನೆ ಪ್ರಭಾರ ನಿರ್ದೇಶಕ ಕರಿಕಾಳನ್ ತಿಳಿಸಿದರು.

ನಾಗರಹೊಳೆಯಲ್ಲಿ ನಾಳೆಯಿಂದ: ‘ನಾಗರಹೊಳೆಯಲ್ಲಿ ಜ.23 ರಿಂದ ಫೆ.5ರ ವರೆಗೆ ಗಣತಿ ನಡೆಯಲಿದೆ. ಅಖಿಲ ಭಾರತ ಮಟ್ಟದಲ್ಲಿ ಕೊನೆಯದಾಗಿ 2018 ರಲ್ಲಿ ಹುಲಿ ಗಣತಿ ಕಾರ್ಯ ನಡೆದಿತ್ತು. ಆಗ ನಾಗರಹೊಳೆ ಅರಣ್ಯದಲ್ಲಿ ಒಟ್ಟು 125 ಹುಲಿಗಳು ಪತ್ತೆಯಾಗಿದ್ದವು. ಪ್ರತಿ ನೂರು ಚದರ ಕಿ.ಮೀ.ಗೆ 12 ಹುಲಿಗಳು ವಾಸವಿರುವುದು ದೃಢಪಟ್ಟಿದೆ. ಹುಲಿಗಳ ಸಾಂದ್ರತೆಯಲ್ಲಿ ನಾಗರಹೊಳೆ, ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ’ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹುಲಿ ಯೋಜನಾ ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದರು.

ಆ್ಯಪ್‌ ಮೂಲಕ ಗಣತಿ:ಈ ಬಾರಿ ಪೂರ್ಣ ಪ್ರಮಾಣದಲ್ಲಿ ಎಂ–ಸ್ಟ್ರೈಪ್ಸ್‌(M-STrIPES– ಮಾನಿಟರಿಂಗ್ ಸಿಸ್ಟಮ್ ಫಾರ್‌ ಟೈಗರ್ಸ್‌: ಇಂಟೆನ್ಸಿವ್‌ ಪ್ರೊಟೆಕ್ಷನ್‌ ಆ್ಯಂಡ್ ಇಕಾಲಾಜಿಕಲ್‌ ಸ್ಟೇಟಸ್‌’)‌ ಎಂಬ ಆ್ಯಪ್ ಮೂಲಕ ಗಣತಿ ನಡೆಯಲಿದೆ. ಆ್ಯಪ್‌ ಬಳಕೆ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಈ ಬಾರಿ ಹುಲಿಗಳ ಜತೆಯಲ್ಲೇ ಇತರ ಮಾಂಸಾಹಾರಿ ಪ್ರಾಣಿಗಳು, ಆನೆ ಸೇರಿದಂತೆ ದೊಡ್ಡ ಸಸ್ಯಾಹಾರಿ ಪ್ರಾಣಿಗಳ ಗಣತಿಯೂ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.