ADVERTISEMENT

ಬದುಕಿಗೆ ಸಂಚಕಾರ ತಂದ ‘ಟಿಕ್-ಟಾಕ್’ ಕ್ರೇಜ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 17:40 IST
Last Updated 18 ಜೂನ್ 2019, 17:40 IST
ಟಿಕ್-ಟಾಕ್‌ಗೆ ಹಿಮ್ಮುಖವಾಗಿ ನೆಗೆಯಲು ಮುಂದಾಗಿರುವ ಕುಮಾರ್
ಟಿಕ್-ಟಾಕ್‌ಗೆ ಹಿಮ್ಮುಖವಾಗಿ ನೆಗೆಯಲು ಮುಂದಾಗಿರುವ ಕುಮಾರ್   

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮದ ಯುವಕ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲು ಟಿಕ್- ಟಾಕ್ ಮಾಡಲು ಹೋಗಿ ಬದುಕಿಗೆ ಸಂಚಕಾರ ತಂದುಕೊಂಡಿದ್ದಾರೆ.

ಕುಮಾರ್ ಆರ್ಕೆಸ್ಟ್ರಾಗಳಲ್ಲಿ ನೃತ್ಯಪಟುವಾಗಿದ್ದಾರೆ. ಕೆಲವು ಶಾಲಾ ಮಕ್ಕಳಿಗೆ ನೃತ್ಯ ಕಲಿಸುತ್ತಾರೆ. ಶನಿವಾರ(ಜೂ.15) ಸಂಜೆ ಗ್ರಾಮದ ಶಾಲಾ ಮೈದಾನದಲ್ಲಿ ಟಿಕ್– ಟಾಕ್‌ಗಾಗಿ ವಿಡಿಯೊ ಮಾಡಲು ಸ್ನೇಹಿತರಿಗೆ ತಿಳಿಸಿದ್ದಾರೆ. ಹಿಮ್ಮುಖವಾಗಿ ನೆಗೆದು ಸಾಹಸ ಪ್ರದರ್ಶಿಸುವಾಗ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ಬೆನ್ನುಹುರಿ (ಸ್ಪೈನಲ್ ಕಾರ್ಡ್) ಮುರಿದಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಹರಿದಾಡುತ್ತಿದೆ.

ಕುಮಾರ್, ತಂದೆ–ತಾಯಿಗೆ ಒಬ್ಬನೇ ಮಗನಾಗಿದ್ದಾರೆ. ಅವರ ತಂದೆ ಕೂಡ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆರ್ಕೆಸ್ಟ್ರಾದ ದುಡಿಮೆಯೇ ಕುಟುಂಬ ನಿರ್ವಹಣೆಗೆ ಮೂಲವಾಗಿದೆ. ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

‘ಚಿಕಿತ್ಸೆಗೆ ₹10 ಲಕ್ಷ ಖರ್ಚಾಗುತ್ತದೆ. ಅಧಿಕ ಹಣ ಖರ್ಚು ಮಾಡಿಶಸ್ತ್ರಚಿಕಿತ್ಸೆ ಮಾಡಿದರೆ ಕುತ್ತಿಗೆ ಸ್ಥಿರವಾಗಿ ನಿಲ್ಲುವಂತೆ ಮಾಡಬಹುದು. ಆದರೆ, ಓಡಾಡಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅವನುಈ ರೀತಿ ಸಾಹಸಗಳನ್ನು ಮಾಡಿದ್ದನ್ನುನಾನು ಎಂದೂ ನೋಡಿರಲಿಲ್ಲ. ಇತ್ತೀಚೆಗೆ ನೃತ್ಯಶಾಲೆ ಆರಂಭಿಸುವುದಾಗಿ ನನ್ನ ಬಳಿ ಹೇಳಿದ್ದ’ ಎಂದು ಕುಮಾರ್ ಚಿಕ್ಕಮ್ಮ ನಾಗವೇಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.