ADVERTISEMENT

ನ್ಯಾಯಾಲಯಗಳ ಪ್ರಕರಣ ನಿರ್ವಹಣೆಗೆ ಕಾಲಮಿತಿ

ಹೈಕೋರ್ಟ್‌ ಆದೇಶದಂತೆ ಕಾನೂನು ಇಲಾಖೆಯಿಂದ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 19:06 IST
Last Updated 7 ನವೆಂಬರ್ 2020, 19:06 IST

ಬೆಂಗಳೂರು: ವಿವಿಧ ಹಂತದ ನ್ಯಾಯಾಲಯಗಳಲ್ಲಿರುವ ಪ್ರಕರಣಗಳಲ್ಲಿ ವಾದ ಮಂಡನೆಯ ನಿರ್ವಹಣೆ, ಆದೇಶಗಳ ಪಾಲನೆ, ಅನುಷ್ಠಾನ, ಮೇಲ್ಮನವಿ ಸಲ್ಲಿಕೆ ಮತ್ತಿತರ ಪ್ರಕ್ರಿಯೆಗಳಿಗೆ ಕಾಲಮಿತಿ ನಿಗದಿಗೊಳಿಸಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಕಾನೂನು ಇಲಾಖೆ ಗುರುವಾರ ಸುತ್ತೋಲೆ ಹೊರಡಿಸಿದೆ.

ರಿಟ್‌ ಅರ್ಜಿಯೊಂದರ ವಿಚಾರಣೆ ಬಳಿಕ ಮಾರ್ಚ್‌ 19ರಂದು ಹೈಕೋರ್ಟ್‌ ನೀಡಿದ್ದ ನಿರ್ದೇಶನಗಳನ್ನು ಆಧರಿಸಿ ಈ ಸುತ್ತೋಲೆ ಹೊರಡಿಸಲಾಗಿದೆ. ನ್ಯಾಯಾಲಯದ ಪ್ರಕರಣಗಳಲ್ಲಿ ಯಾವ ಹಂತದಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗುವ ರಿಟ್‌ ಅರ್ಜಿಯ ಪ್ರತಿ ತಲುಪುತ್ತಿದ್ದಂತೆ ಪ್ರತ್ಯೇಕ ಕಡತದಲ್ಲಿ ಆ ಬಗ್ಗೆ ನೋಂದಣಿ ಮಾಡಬೇಕು. ಅಗತ್ಯ ಕ್ರಮಗಳನ್ನು ಕೈಗೊಳ್ಳಲು ವಿಳಂಬ ಮಾಡಬಾರದು. ನಿರ್ದಿಷ್ಟ ಸೂಚನೆಗಳಿಲ್ಲದೇ ಮಧ್ಯಂತರ ತಡೆ ಆದೇಶ ಬಂದಲ್ಲಿ ಅಂತಹವುಗಳ ವಿರುದ್ಧ ತಕ್ಷಣ ಮೇಲ್ಮನವಿ ಸಲ್ಲಿಸಬೇಕು. ಅವಕಾಶವಿರುವ ಪ್ರಕರಣಗಳನ್ನು ಮುಂಚಿತವಾಗಿ ವಿಚಾರಣೆಗೆ ಕೋರಿ ಅರ್ಜಿ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ADVERTISEMENT

ಹೈಕೋರ್ಟ್‌ ತೀರ್ಪಿನ ಪ್ರತಿ ಲಭ್ಯವಾದ ಬಳಿಕ ಆ ಬಗ್ಗೆಯೂ ಕಡತದಲ್ಲಿ ದಾಖಲಿಸಬೇಕು. ಪಾಲನೆಗೆ ಕಾಲಮಿತಿ ನಿಗದಿಪಡಿಸದ ಪ್ರಕರಣಗಳಲ್ಲಿ ಸ್ಪಷ್ಟನೆ ಕೋರಿ ಅರ್ಜಿ ಸಲ್ಲಿಸಬೇಕು. ಎರಡು ವಾರಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಯೋಗ್ಯವಾದ ಪ್ರಕರಣಗಳಲ್ಲಿ ಹೈಕೋರ್ಟ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಇಲಾಖೆಯ ಕಾನೂನು ಅಧಿಕಾರಿಗೆ ಪ್ರಸ್ತಾವ ಸಲ್ಲಿಸಿ ಏಳು ದಿನಗಳೊಳಗೆ ಅನುಮತಿ ಪಡೆಯಬೇಕು ಎಂದು ಸೂಚಿಸಲಾಗಿದೆ.

ಹೈಕೋರ್ಟ್‌ ತೀರ್ಪಿನ ಪಾಲನೆ, ಅನುಷ್ಠಾನ ಮತ್ತು ಮೇಲ್ಮನವಿ ಸಲ್ಲಿಕೆ ಕುರಿತು ವ್ಯಾಜ್ಯ ನಿರ್ವಹಣಾ ಅಧಿಕಾರಿಗಳು ಸಕ್ಷಮ ಪ್ರಾಧಿಕಾರಕ್ಕೆ ಮಾಸಿಕ ವರದಿ ಸಲ್ಲಿಸಬೇಕು. ತೀರ್ಪು ಬಂದ 30 ದಿನಗಳೊಳಗೆ ಹೈಕೋರ್ಟ್‌ನಲ್ಲಿ ಪರಿಶೀಲನಾ ಅರ್ಜಿ ಸಲ್ಲಿಸಬೇಕು. ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಬೇಕಾದ ಪ್ರಕರಣಗಳಲ್ಲಿ 90 ದಿನಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಲು ಸಾಧ್ಯವಾಗದಿದ್ದಲ್ಲಿ, ಆಯಾ ಇಲಾಖೆಯ ಅಧಿಕಾರಿಗಳು ಕಾರಣ ಸಹಿತ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಆಯಾ ಇಲಾಖೆಯಲ್ಲಿ ಆಡಳಿತಾತ್ಮಕ ಜವಾಬ್ದಾರಿ ಹೊಂದಿರುವವರು ಸಕಾಲಕ್ಕೆ ಪ್ರಸ್ತಾವ ಸಲ್ಲಿಸಿ ಒಪ್ಪಿಗೆ ಪಡೆಯಬೇಕು. ಇಲಾಖೆಗೆ ಸಂಬಂಧಿಸಿದ ಪ್ರಮುಖ ಪ್ರಕರಣಗಳ ವರದಿ, ತೀರ್ಪು, ಆದೇಶದ ಪ್ರತಿಗಳು, ಕಾಯ್ದೆ ಮತ್ತು ನಿಯಮಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ವ್ಯಾಜ್ಯಗಳ ನಿರ್ವಹಣೆ ಕುರಿತು ಅಧಿಕಾರಿಗಳು, ಸಿಬ್ಬಂದಿಗೆ ಕಾರ್ಯಾಗಾರ ಆಯೋಜಿಸಬೇಕು. ಇಲಾಖೆಗಳ ಮುಂದೆ ಬಾಕಿ ಇರುವ ಸಾರ್ವಜನಿಕರ ಅಹವಾಲುಗಳನ್ನು ಮೂರು ತಿಂಗಳೊಳಗೆ ಇತ್ಯರ್ಥಪಡಿಸಬೇಕು ಎಂದು ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ವೈ.ವತಾವತಿ ಸುತ್ತೋಲೆಯಲ್ಲಿ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.