ನವದೆಹಲಿ: ತಂಬಾಕು ಬೆಳೆಯನ್ನು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ವ್ಯಾಪ್ತಿಗೆ ತರಬೇಕು ಹಾಗೂ ತಂಬಾಕಿಗೆ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ಹಾಗೂ ಬಿಜೆಪಿ ನಿಯೋಗವು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್ ಗೋಯಲ್ ಅವರಿಗೆ ಸೋಮವಾರ ಮನವಿ ಸಲ್ಲಿಸಿತು.
‘ಬೆಲೆ ಕುಸಿತ ಸೇರಿ ಹಲವಾರು ಸಮಸ್ಯೆಗಳಿಗೆ ಸಿಲುಕಿ ತೀವ್ರ ಸಂಕಷ್ಟದಲ್ಲಿರುವ ರಾಜ್ಯದ ತಂಬಾಕು ಬೆಳೆಗಾರರ ಹಿತದೃಷ್ಟಿಯಿಂದ ನಾವು ಸಚಿವರಿಗೆ ಈ ಮನವಿ ಸಲ್ಲಿಸಿದ್ದೇವೆ. ಇದೇ ವೇಳೆ ನಮ್ಮ ಜತೆಯಲ್ಲಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೂ ಗೋಯಲ್ ಅವರಿಗೆ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು’ ಎಂದು ಯುವ ಜನತಾದಳದ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
‘ನೆರೆ ರಾಜ್ಯಗಳಲ್ಲಿ ತಂಬಾಕು ಬೆಳೆಗಾರಿಗೆ ಉತ್ತಮ ದರ ಸಿಗುತ್ತಿದೆ. ಕರ್ನಾಟಕದ ಬೆಳೆಗಾರರಿಗೆ ಸಿಗುತ್ತಿಲ್ಲ. ಈಕಡೆಗೆ ಗಮನ ಹರಿಸಿ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುವಂತೆ ಮಾಡಬೇಕು. ಆಂಧ್ರ ಪ್ರದೇಶದಲ್ಲಿ ತಂಬಾಕಿನ ಬೆಲೆ ಪ್ರತಿ ಕೆಜಿಗೆ ಸರಾಸರಿ ₹320 ಇದೆ. ಕರ್ನಾಟಕದಲ್ಲಿ ಪ್ರತಿ ಕೆಜಿಗೆ ₹265 ಇದೆ. ಕಡಿಮೆ ಬೆಲೆಯಿಂದಗಾಗಿ ಬಡ ಹಾಗೂ ಮಧ್ಯಮ ಗಾತ್ರದ ಬೆಳೆಗಾರರಿಗೆ ಬಹಳ ನಷ್ಟವಾಗುತ್ತಿದೆ’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
‘ತಂಬಾಕು ಬೆಳೆಯನ್ನು ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ವ್ಯಾಪ್ತಿಗೆ ತಂದರೆ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಗಾತ್ರದ ಬೆಳೆಗಾರರಿಗೆ ಸಹಾಯ ಆಗುತ್ತದೆ. ತಂಬಾಕು ಬೆಳೆಗೂ ಬೆಂಬಲ ಬೆಲೆ ನೀಡಿದರೆ ಬಡ ಕುಟುಂಬಗಳಿಗೆ ಆರ್ಥಿಕವಾಗಿ ಶಕ್ತಿ ತುಂಬಿದಂತೆ ಆಗುತ್ತದೆ. ಐಟಿಸಿಯಂತಹ ಬೃಹತ್ ಕಂಪನಿಗಳು ಇಂತಹ ಬೆಳೆಗಾರರಿಂದ ನೇರವಾಗಿ ತಂಬಾಕು ಖರೀದಿಸುವಂತೆ ಸೂಚನೆ ಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಚಿವ ಸಾ.ರಾ.ಮಹೇಶ್, ಹುಣಸೂರು ಶಾಸಕ ಜಿ.ಟಿ.ಹರೀಶ್ ಗೌಡ, ಕೋಲಾರ ಸಂಸದ ಮಲ್ಲೇಶ್ ಬಾಬು ನಿಯೋಗದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.