ADVERTISEMENT

ಟೋಲ್‌ ದರ ದುಪ್ಪಟ್ಟು: ಇಂದು ಲಾರಿ ಮಾಲೀಕರ ಸಭೆ

ಹೋರಾಟದ ಬಗ್ಗೆ ಬೆಂಗಳೂರಿನಲ್ಲಿ ನಿರ್ಣಯ

ಬಾಲಕೃಷ್ಣ ಪಿ.ಎಚ್‌
Published 25 ಫೆಬ್ರುವರಿ 2023, 22:00 IST
Last Updated 25 ಫೆಬ್ರುವರಿ 2023, 22:00 IST
ಜಿ.ಆರ್‌. ಷಣ್ಮುಖಪ್ಪ
ಜಿ.ಆರ್‌. ಷಣ್ಮುಖಪ್ಪ   

ದಾವಣಗೆರೆ: ರಾಜ್ಯದ ಹೆದ್ದಾರಿಗಳ ಎಲ್ಲಾ ಟೋಲ್‌ಗಳಲ್ಲಿ ಫೆಬ್ರುವರಿ 15ರಿಂದ ದರ ದುಪ್ಪಟ್ಟು ಮಾಡಿರುವುದರಿಂದ ಲಾರಿ ಮಾಲೀಕರು ಕಂಗಾಲಾಗಿದ್ದಾರೆ. ಹೀಗಾಗಿ ಟೋಲ್‌ ದರ ಏರಿಕೆ ವಿರುದ್ಧ ಹೋರಾಟ ಕೈಗೊಳ್ಳಲು ಲಾರಿ ಮಾಲೀಕರು ಫೆ.26ರಂದು ಬೆಂಗಳೂರಿನಲ್ಲಿ ಸಭೆ ಹಮ್ಮಿಕೊಂಡಿದ್ದಾರೆ.

‘ಈ ಹಿಂದೆ ನಮ್ಮ ಲಾರಿ ಬೆಂಗಳೂರಿನಿಂದ ಮುಂಬೈಗೆ ಹೋಗಿ ಮತ್ತೆ ಬೆಂಗಳೂರಿಗೆ ಬರಬೇಕಿದ್ದರೆ ₹12 ಸಾವಿರ ಟೋಲ್‌ ಕಟ್ಟಬೇಕಿತ್ತು. ಈಗ ₹ 24 ಸಾವಿರ ಕಟ್ಟಬೇಕಾಗಿದೆ. ಇದು ಬೆಂಗಳೂರಿನಿಂದ ಮುಂಬೈಗೆ ಹೋಗಿ ಬರಲು ಲಾರಿಗೆ ಬೇಕಾದ ಡೀಸೆಲ್‌ ವೆಚ್ಚದಷ್ಟೇ ಆಗುತ್ತಿದೆ. ಕಷ್ಟಪಟ್ಟು ದುಡಿದು ತಿನ್ನುವವರ ಹೊಟ್ಟೆಗೆ ಹೊಡೆಯುವ ನಿರ್ಧಾರವಿದು’ ಎಂದು ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್‌. ಷಣ್ಮುಖಪ್ಪ ‘ಪ್ರಜಾವಾಣಿ’ ಬಳಿ ನೋವು ಹಂಚಿಕೊಂಡಿದ್ದಾರೆ.

‘ದೆಹಲಿಗೆ ಹೋಗಿ ಬರಲು ಈ ಮೊದಲು ₹ 23,000 ಕಟ್ಟುತ್ತಿದ್ದ ಟೋಲ್‌ ದರ ಈಗ ₹ 46,000 ಆಗಿದೆ. ಬೆಂಗಳೂರಿನಿಂದ ಚೆನ್ನೈಗೆ
₹ 2,250 ಇದ್ದಿದ್ದು, ₹ 4,500 ಆಗಿದೆ. ಹೈದರಾಬಾದ್‌ಗೆ ₹ 5,000 ಬದಲು ₹ 10,000 ಕಟ್ಟಬೇಕಾಗಿದೆ’ ಎಂದರು.

ADVERTISEMENT

ಕಾರು, ಜೀಪು ಮುಂತಾದ ಲಘು ವಾಹನಗಳ ದರ ಟೋಲ್‌ನಿಂದ ಟೋಲ್‌ಗೆ ಸ್ವಲ್ಪ ವ್ಯತ್ಯಾಸ ಇರುತ್ತದೆ. ಭಾರೀ ವಾಹನಗಳ ದರ ಬಹುತೇಕ ಕಡೆಗಳಲ್ಲಿ ಒಂದೇ ಇದೆ.

‘ರಾಷ್ಟ್ರೀಯ ಹೆದ್ದಾರಿ ಚತುಷ್ಪಥ, ಷಟ್ಪಥ, ಅಷ್ಟಪಥಗಳ ಕಾಮಗಾರಿ ಮುಗಿಯದೇ ಟೋಲ್‌ ದರ ವಸೂಲಿ ಮಾಡಬಾರದು ಎಂದು ಹಿಂದೆ ಒತ್ತಡ ಬಂದಿತ್ತು. ಆಗ ನಿಗದಿತ ಶುಲ್ಕದಲ್ಲಿ ಶೇ 25ರಷ್ಟು ಕಡಿಮೆ ಮಾಡಲಾಗಿತ್ತು. ಈಗ ಆ ಶೇ 25ರಷ್ಟು ಹೆಚ್ಚು ಮಾಡುವ ಬದಲು ದುಪ್ಪಟ್ಟು ಮಾಡಲಾಗಿದೆ’ ಎಂದು ಟೋಲ್‌ ಸಿಬ್ಬಂದಿ ಚಂದ್ರಶೇಖರ್‌ ಕಲಪನಹಳ್ಳಿ ಮಾಹಿತಿ ನೀಡಿದ್ದಾರೆ.

ಅವಧಿ ಮುಗಿದಿರುವ 16 ಟೋಲ್‌: ರಾಜ್ಯದಲ್ಲಿ 42 ಟೋಲ್‌ಗಳಿವೆ. ಅದರಲ್ಲಿ ಹುಬ್ಬಳ್ಳಿ–ಗಬ್ಬೂರು ಟೋಲ್‌ ಸಹಿತ 16 ಟೋಲ್‌ಗಳ ಅವಧಿ ಮುಗಿದಿದೆ. ಆದರೂ ಅವು ಪೂರ್ಣಪ್ರಮಾಣದಲ್ಲಿ ಟೋಲ್ ಸಂಗ್ರಹಿಸುತ್ತಿವೆ. ಚಿತ್ರದುರ್ಗ–ಹೊಸಪೇಟೆ ನಡುವಿನ ಹೆದ್ದಾರಿಯಲ್ಲಿ 30 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ 3 ಟೋಲ್‌ಗಳಿವೆ. 60 ಕಿ.ಮೀ.ಗೆ ಒಂದು ಟೋಲ್‌ ಇರಬೇಕು. ಇಂಥ ಹೆಚ್ಚುವರಿ ಟೋಲ್‌ಗಳು ಕೂಡ ರದ್ದಾಗಿಲ್ಲ.

10 ವರ್ಷ ಮತ್ತು 15 ವರ್ಷಗಳ ಅವಧಿವರೆಗೆ ಟೋಲ್‌ ಸಂಗ್ರಹಿಸುವ ಒಪ್ಪಂದದಲ್ಲಿ ಇವು ಕಾರ್ಯಾಚರಣೆ ಮಾಡುತ್ತಿವೆ. ಒಪ್ಪಂದದ ಅವಧಿ ಮುಗಿದ ಬಳಿಕ ನಿರ್ವಹಣೆಗಾಗಿ ಮಾತ್ರ ಶೇ 40ರಷ್ಟು ಟೋಲ್‌ ವಸೂಲಿ ಮಾಡಬೇಕು. ಲಾರಿಯೊಂದಕ್ಕೆ ₹95 ಇದ್ದರೆ ಅವಧಿ ಮುಗಿದ ಟೋಲ್‌ನಲ್ಲಿ ₹34 ತೆಗೆದುಕೊಳ್ಳಬೇಕು. ಆದರೆ, ಕಡಿಮೆ ಮಾಡುವ ಬದಲು ₹ 195 ತೆಗೆದುಕೊಳ್ಳಲಾಗುತ್ತಿದೆ ಎಂದು ಲಾರಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ತೀರ್ಮಾನವು ಜನ ವಿರೋಧಿ, ಕಾರ್ಮಿಕ ವಿರೋಧಿಯಾಗಿದ್ದು, ಈ ಆದೇಶವನ್ನು ಹಿಂಪಡೆಯಬೇಕು. ಇದರ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು ಎಂಬುದನ್ನು ತೀರ್ಮಾನಿಸಲು ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಸಭೆ ಕರೆಯಲಾಗಿದೆ’ ಎಂದು ಷಣ್ಮುಖಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.