ಬೆಂಗಳೂರು: ‘ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ರಾಜ್ಯ ವ್ಯಾಪಿ ಪ್ರವಾಸ ಮಾಡಲು ಸಿದ್ಧನಿದ್ದೇನೆ. ಆ ಮೂಲಕ ಪಕ್ಷವನ್ನು ಬಲಪಡಿಸುತ್ತೇವೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ–ಚಂದ್ರರಷ್ಟೇ ನಿಶ್ಚಿತ’ ಎಂದು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅಭಿಮಾನಿಗಳು, ಪಕ್ಷದ ನಾಯಕರ ಜತೆ ತಮ್ಮ 83ನೇ ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪ್ರತಿ ಜಿಲ್ಲೆಯಲ್ಲೂ ಕಾರ್ಯಕರ್ತರ ಸಮಾವೇಶ ಮಾಡಿ ಅವರನ್ನು ಹುರಿದುಂಬಿಸುವ ಕೆಲಸ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಈ ಭ್ರಷ್ಟ ಸರ್ಕಾರ ತೊಲಗಿಸುವ ಕೆಲಸ ಆಗಬೇಕು. ಪಕ್ಷವನ್ನು ಅಧಿಕಾರಕ್ಕೆ ತರಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಯಡಿಯೂರಪ್ಪ ಅವರ ಅವಧಿಯಲ್ಲಿ ಬೆಂಗಳೂರಿನಲ್ಲಿ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರ ತಡೆ ಹಾಕಿದೆ ಎಂದು ದೂರಿದರು.
‘ಎರಡು ದಿನಗಳ ಹಿಂದೆ ಬೆಂಗಳೂರು ನಗರದ ಶಾಸಕರು ಮತ್ತು ಸಂಸದ ಸಭೆ ನಡೆಸಿ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಲಾಗಿತ್ತು. ತಡೆ ಒಡ್ಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಬೇಕು ಎಂದು ಮುಖ್ಯಮಂತ್ರಿ ಅವರ ಮೇಲೆ ಒತ್ತಡ ಹೇರಲು ತೀರ್ಮಾನಿಸಲಾಗಿತ್ತು. ಮುಖ್ಯಮಂತ್ರಿಯವರನ್ನು ಶುಕ್ರವಾರ ಭೇಟಿ ಮಾಡಿ ಮನವಿ ಪತ್ರ ನೀಡಲಿದ್ದೇವೆ’ ಎಂದು ತಿಳಿಸಿದರು.
ಯಡಿಯೂರಪ್ಪ ಅವರ ಜನ್ಮ ದಿನದ ಪ್ರಯುಕ್ತ ಅವರ ಅಭಿಮಾನಿಗಳು ತಾಲ್ಲೂಕು ಕೇಂದ್ರಗಳು, ಜಿಲ್ಲಾ ಕೇಂದ್ರಗಳಲ್ಲಿ ಆಸ್ಪತ್ರೆಗಳಿಗೆ ಹಣ್ಣು–ಹಂಪಲು ವಿತರಿಸಿದ್ದಾರೆ. ಅಲ್ಲದೇ, ಅವರು ಮುಖ್ಯಮಂತ್ರಿ ಆಗಿದ್ದಾಗ ಜಾರಿ ಮಾಡಿದ್ದ ಭಾಗ್ಯಲಕ್ಷ್ಮಿ ಯೋಜನೆ, ಬೈಸಿಕಲ್ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.