ADVERTISEMENT

ಹೋಟೆಲ್‌ಗೆ ಸೋನಿಯಾ ಹೆಸರಿಡಿ: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ

ಕಾಂಗ್ರೆಸ್ ದುಡ್ಡಲ್ಲಿ ಕ್ಯಾಂಟೀನ್ ನಡೆಸಿ, ಕೊಳ್ಳೆ ಹೊಡೆದ ಹಣಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 19:41 IST
Last Updated 18 ಡಿಸೆಂಬರ್ 2019, 19:41 IST
ಇಂದಿರಾ ಕ್ಯಾಂಟೀನ್
ಇಂದಿರಾ ಕ್ಯಾಂಟೀನ್   

ಬೆಂಗಳೂರು:‘ಕಾಂಗ್ರೆಸ್ ದುಡ್ಡಿನಲ್ಲೇ ಇಂದಿರಾ ಕ್ಯಾಂಟೀನ್‌ ನಡೆಸುವುದಾದರೆ ಯಾವ ಅಭ್ಯಂತರವೂ ಇಲ್ಲ. ಕೊಳ್ಳೆ ಹೊಡೆದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿದಂತಾಗುತ್ತದೆ. ಮಾಂಸಾಹಾರ ಹೋಟೆಲ್‌ ಆರಂಭಿಸಿ ಸೋನಿಯಾ ಹೆಸರನ್ನೂ ಇಟ್ಟುಕೊಳ್ಳಲಿ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

‘ದುಡ್ಡು ಹೊಡೆಯಲು ಮಾಡಿದ ಸಂಚಿನ ಫಲವೇ ಇಂದಿರಾ ಕ್ಯಾಂಟೀನ್‌. ಅದರ ಹೆಸರಲ್ಲಿಸರ್ಕಾರದ ದುಡ್ಡನ್ನು ಪೋಲು ಮಾಡಲು ಬಿಡುವುದಿಲ್ಲ. ಅದಕ್ಕಾಗಿ ಇದನ್ನು ಮುಚ್ಚುವುದೇ ಒಳಿತು’ ಎಂದು ಅವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಭಾರಿ ಪ್ರಮಾಣದಲ್ಲಿ ದರಪಟ್ಟಿ ಹೆಚ್ಚಿಸಿ ₹ 1 ಕೋಟಿ ವೆಚ್ಚವನ್ನು ತೋರಿಸಿದ್ದಾರೆ. ಇಲ್ಲೇನು ಬೆಳ್ಳಿ ಇಟ್ಟಿಗೆ ಇಟ್ಟಿದ್ದಾರೆಯೇ? 20 ಜನರಿಗೆ ಊಟ ಸಿದ್ಧಪಡಿಸಿ, 200 ಊಟದ ಬಿಲ್‌ ಮಾಡುತ್ತಿದ್ದಾರೆ. ಯಾವ ಬೀಗರಿಗೆ ಗುತ್ತಿಗೆ ಕೊಟ್ಟಿದ್ದಾರೆ ಎಂಬುದೂ ಗೊತ್ತಿದೆ. ಅಕ್ರಮಗಳ ತನಿಖೆ ನಡೆದು ಕೊಳ್ಳೆ ಹೊಡೆದವರ ನಿಜ ಬಣ್ಣ ಶೀಘ್ರ ಬಯಲಿಗೆ ಬರಲಿದೆ’ ಎಂದರು.

ADVERTISEMENT

‘ವಾಲ್ಮೀಕಿ ಅನ್ನ ಕುಟೀರ ಎಂಬ ಹೆಸರು ಇಡಲು ಸರ್ಕಾರ ನಿರ್ಧಾರ ಮಾಡಿಲ್ಲ. ಹೀಗೆ ಮಾಡಬಹುದು ಎಂಬ ಮನವಿಯೊಂದು ಬಂದಿದೆ ಅಷ್ಟೇ. ಆದರೆ ಹೆಸರು ಬದಲಿಸುವ ಮೊದಲೇ ಗುಲ್ಲೆಬ್ಬಿಸಲಾಗಿದೆ’ ಎಂದರು.

‘ಇಂದಿರಾ ಕ್ಯಾಂಟೀನ್‌ ಹೆಸರು ಬದಲಿಸುವುದಾದರೆ ‘ಅನ್ನಪೂರ್ಣೇಶ್ವರಿ’ ಎಂದು ಹೆಸರಿಡುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತೇನೆ’ ಎಂದರು.

‘ಚತುಷ್ಪಥ ಹೆದ್ದಾರಿ ನಿರ್ಮಾಣವಾದಾಗ ಅಟಲ್‌ ಬಿಹಾರಿ ವಾಜಪೇಯಿ ಹೆಸರಿನಲ್ಲಿದ್ದ ಫಲಕ ಕಿತ್ತುಹಾಕಲು ನೂರಾರು ಕೋಟಿ ಖರ್ಚು ಮಾಡಿದ ಖದೀಮರು’ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ನಾವಿನ್ನೂ ಸತ್ತಿಲ್ಲ: ಡಿಕೆಶಿ ಎಚ್ಚರಿಕೆ

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಲು ಸರ್ಕಾರ ಮುಂದಾಗಿ ರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಡಿ.ಕೆ.ಶಿವಕುಮಾರ್, ‘ಕಂದಾಯ ಸಚಿವ ಆರ್.ಅಶೋಕ್ ಅವರು ಹೆಸರು ಬದಲಿಸುವ ಕನಸು ಕಾಣುತ್ತಿದ್ದಾರೆ. ನಾವಿನ್ನೂ ಸತ್ತಿಲ್ಲ’ ಎಂದು ಗುಡುಗಿದ್ದಾರೆ.

‘ಇದು ಭಾವನಾತ್ಮಕ ವಿಚಾರ. ಹೆಸರು ಬದಲಾವಣೆ ಮಾಡಲು ಅವಕಾಶ ನೀಡುವುದಿಲ್ಲ. ನಾವು ಅಧಿಕಾರದಲ್ಲಿ ಇದ್ದಾಗಲೂ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳಿದ್ದವು. ಅವರ ಹೆಸರನ್ನು ಬದಲಾಯಿಸಲಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಹಿಂದೆ ಸಾರಿಗೆ ಸಚಿವರಾಗಿದ್ದ ಅಶೋಕ್ ಅವರು ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ತಂದರು. ಕಾಂಗ್ರೆಸ್ ಹೊರತಾದ ಇತರ ನಾಯಕರ ಹೆಸರಿನಲ್ಲಿ ಇದ್ದ ಯೋಜನೆಗಳು, ಕಾರ್ಯಕ್ರಮಗಳಿಗೂ ಹೆಸರು ಬದಲಾವಣೆ ಮಾಡಲಿಲ್ಲ. ಬಿಜೆಪಿಯ ಈ ನಡೆಯನ್ನು ವಿರೋಧಿಸಿ, ನಮ್ಮ ಸ್ನೇಹಿತರಿಗೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ’ ಎಂದರು.

ಬಡವರ ವಿರೋಧಿಗಳು: ‘ಬಿಜೆಪಿಯವರು ಬಡವರ ವಿರೋಧಿಗಳು. ಬಡವರ ಪರವಾಗಿ ನಾವು ಯೋಜನೆ ತಂದರೆ, ಅದನ್ನು ಇವರು ಮುಚ್ಚಿಸುತ್ತಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.

ಹೆಸರು ಬದಲು ಪ್ರಸ್ತಾವ ಇಲ್ಲ: ಸಿ.ಎಂ

ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಹೆಸರು ಬದಲಿಸುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ, ಅಂತಹ ಆಲೋಚನೆಯನ್ನೂ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬುಧವಾರ ಇಲ್ಲಿ ತಿಳಿಸಿದರು.

‘ಕ್ಯಾಂಟೀನ್ ಮುಚ್ಚಬೇಕಾಗುತ್ತದೆ’

ಇಂದಿರಾ ಕ್ಯಾಂಟೀನ್ ಬಗ್ಗೆ ಹಲವಾರು ದೂರುಗಳು ಬರುತ್ತಿದ್ದು, ಈ ಯೋಜನೆಯನ್ನು ಮುಂದುವರಿಸಬೇಕೆ, ಬೇಡವೆ ಎಂಬ ಬಗ್ಗೆ ಶೀಘ್ರ ನಿರ್ಧರಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

‘ಈ ಕ್ಯಾಂಟೀನ್‌ಗಳಲ್ಲಿ ಊಟ ಮಾಡುತ್ತಿರುವವರ ಸಂಖ್ಯೆ ಹಾಗೂ ಗುತ್ತಿಗೆದಾರರು ಕೊಡುತ್ತಿರುವ ಲೆಕ್ಕಕ್ಕೂ ತಾಳೆಯಾಗುತ್ತಿಲ್ಲ. ಕೋಟ್ಯಂತರ ರೂಪಾಯಿ ದುರುಪಯೋಗ ಆಗುತ್ತಿದೆ’ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್‌ನವರಿಗೆ ನೆಹರು ಕುಟುಂಬದ ಮೂವರು ನಾಯಕರ ಹೆಸರು ಬಿಟ್ಟರೆ ಬೇರೆ ಯಾರ ಹೆಸರೂ ಸಿಗುವುದಿಲ್ಲವೆ. ಈ ಮೂವರು ಬಿಟ್ಟರೆ ದೇಶಕ್ಕಾಗಿ ತ್ಯಾಗಮಾಡಿದ ಇತರ ನಾಯಕರ ಹೆಸರುಗಳು ನೆನಪಿಗೆ ಬರುವುದಿಲ್ಲವೆ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.