ADVERTISEMENT

ಬೋಟ್ ತಪ್ಪಿದ ಪರಿಣಾಮ ರಾತ್ರಿ ಸೆಂಟ್ ಮೆರೀಸ್ ದ್ವೀಪದಲ್ಲೇ ಕಳೆದ ಪ್ರವಾಸಿಗರು

ಬೆಳಿಗ್ಗೆ ಬೋಟ್ ಸಿಬ್ಬಂದಿ ಹೋಗಿ ನೋಡಿದಾಗ ಘಟನೆ ಬೆಳಕಿಗೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2019, 14:46 IST
Last Updated 24 ನವೆಂಬರ್ 2019, 14:46 IST
   

ಉಡುಪಿ: ಕೇರಳದ ಕೊಚ್ಚಿಮೂಲದ ನಾಲ್ವರು ಪ್ರವಾಸಿಗರು ಶನಿವಾರ ರಾತ್ರಿ ಪೂರ್ತಿ ಮಲ್ಪೆಯ ಸೇಂಟ್‌ ಮೇರಿಸ್‌ ಐಲ್ಯಾಂಡ್‌ನಲ್ಲಿ ಕಳೆದಿದ್ದಾರೆ. ಸಂಜೆ ದ್ವೀಪದಿಂದ ಪ್ರವಾಸಿಗರನ್ನು ತೀರಕ್ಕೆ ಕರೆತರುವ ಕೊನೆಯ ಬೋಟ್‌ ತಪ್ಪಿದ ಪರಿಣಾಮ ಪ್ರವಾಸಿಗರು ರಾತ್ರಿ ದ್ವೀಪದಲ್ಲಿಯೇ ಉಳಿಯಬೇಕಾಯಿತು.

ಭಾನುವಾರ ಬೆಳಿಗ್ಗೆ ಐಲ್ಯಾಂಡ್‌ಗೆ ಪ್ರವಾಸಿಗರನ್ನು ಕರೆದೊಯ್ದ ಬೋಟ್‌ ಸಿಬ್ಬಂದಿಗೆ ಅಲ್ಲಿದ್ದ ಕೇರಳ ಪ್ರವಾಸಿಗರು ಕಂಡಿದ್ದಾರೆ. ಬಳಿಕ ಅವರನ್ನು ತೀರಕ್ಕೆ ಕರೆತಂದು ಮಲ್ಪೆ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಪ್ರವಾಸಿಗರನ್ನು ಕೇರಳಕ್ಕೆ ಕಳುಹಿಸಿದ್ದಾರೆ.

ಘಟನೆಯ ವಿವರ:ಜಸ್ಟಿನ್ (34), ಶೀಜಾ (33), ಜೋಶ್ (28) ಹಾಗೂ ಹರೀಶ್ (17) ನ.23ರಂದು ಮಧ್ಯಾಹ್ನ ಮಲ್ಪೆ ಬೀಚ್‌ನಿಂದ ಸೇಂಟ್ ಮೇರಿಸ್‌ ಐಲ್ಯಾಂಡ್‌ಗೆ ತೆರಳಿದ್ದರು. ದ್ವೀಪದಲ್ಲೆಲ್ಲ ಸುತ್ತಾಡಿದ ಬಳಿಕ ಸಮೀಪದಲ್ಲಿದ್ದ ಚಿಕ್ಕ ದ್ವೀಪಕ್ಕೆ ಹೋಗಿದ್ದರು.

ADVERTISEMENT

ಸಂಜೆ ಅಲ್ಲಿ ನೀರಿನಮಟ್ಟ ಏರಿಕೆಯಾಗಿದ್ದರಿಂದ ದ್ವೀಪ ದಾಟಲು ಸಾಧ್ಯವಾಗದೆ ಅಲ್ಲಿಯೇ ಉಳಿದುಕೊಂಡಿದ್ದರು. ಇದರ ಮಧ್ಯೆ ಪ್ರವಾಸಿಗರನ್ನು ವಾಪಸ್‌ ಕರೆತರುವ ಕೊನೆಯ ಬೋಟ್ ಸಂಜೆ 6:45ಕ್ಕೆ ದ್ವೀಪದಿಂದ ತೀರಕ್ಕೆ ಮರಳಿದ ಪರಿಣಾಮ ಪ್ರವಾಸಿಗರು ರಾತ್ರಿ ಅಲ್ಲಿಯೇ ಉಳಿಯಬೇಕಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ದ್ವೀಪದಲ್ಲಿ ರಾತ್ರಿಯ ಹೊತ್ತು ಪ್ರವಾಸಿಗರು ತಂಗಲು ಅವಕಾಶವಿಲ್ಲ. ಹಾಗಾಗಿ, ಯಾವ ಉದ್ದೇಶಕ್ಕೆ ಉಳಿದುಕೊಂಡಿದ್ದರು ಎಂದು ವಿಚಾರಣೆ ನಡೆಸಲಾಯಿತು. ಬೋಟ್‌ ಟಿಕೆಟ್‌, ರೈಲು ಟಿಕೆಟ್‌, ಗುರುತಿನ ಚೀಟಿಗಳನ್ನು ಪರಿಶೀಲಿಸಿ, ಕೇರಳಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.