ADVERTISEMENT

ತಾಲ್ಲೂಕು ಪಂಚಾಯಿತಿ ರದ್ದು: ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ: ಸಚಿವ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 19:25 IST
Last Updated 4 ಫೆಬ್ರುವರಿ 2021, 19:25 IST
ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ   

ಬೆಂಗಳೂರು: ತಾಲ್ಲೂಕು ಪಂಚಾಯಿತಿ ವ್ಯವಸ್ಥೆ ರದ್ದುಪಡಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ವಿಧಾನಸಭೆಯಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಬಿಜೆಪಿಯ ಕುಮಾರ್‌ ಬಂಗಾರಪ್ಪ ಪ್ರಶ್ನೆಗೆ ಉತ್ತರಿಸಿದ ಅವರು, ‘ತಾಲ್ಲೂಕು ಪಂಚಾಯಿತಿಗೆ ಹೆಚ್ಚು ಮೌಲ್ಯ ಇಲ್ಲ ಎಂಬ ಕಾರಣಕ್ಕೆ ಅನೇಕ ಸದಸ್ಯರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಿಂತು ಗೆದ್ದಿದ್ದಾರೆ. ಎರಡು ಸ್ತರದ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ ಶಾಸಕರು ಸಲಹೆಗಳನ್ನು ನೀಡಬೇಕು’ ಎಂದು ವಿನಂತಿಸಿದರು.

ಕುಮಾರ್ ಬಂಗಾರಪ್ಪ, ‘ತಾಲ್ಲೂಕು ಪಂಚಾಯಿತಿಗೆ ಯಾವುದೇ ಅನುದಾನ ನೀಡುತ್ತಿಲ್ಲ. ಯಾವುದೇ ಕೆಲಸಗಳು ಆಗುತ್ತಿಲ್ಲ’ ಎಂದು ಗಮನ ಸೆಳೆದರು.

ADVERTISEMENT

ಜೆಡಿಎಸ್‌ನ ವೆಂಕಟರಾವ್‌ ನಾಡಗೌಡ, ‘ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳ ನಡುವೆ ಸಮನ್ವಯ ಇಲ್ಲ. ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ವರ್ಷಕ್ಕೆ ₹2 ಲಕ್ಷದಿಂದ ₹3 ಲಕ್ಷ ಅನುದಾನ ಕೊಡಲಾಗುತ್ತಿದೆ. ಈ ಅನುದಾನದಿಂದ ಯಾವುದಾದರೂ ಕೆಲಸ ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಒಂದೇ ಕಾಮಗಾರಿಯನ್ನು ಮಾಡಿದ್ದೇವೆ ಎಂದು ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯವರು ಬಿಲ್‌ ಮಾಡಿಸಿಕೊಳ್ಳುತ್ತಾರೆ. ಈ ರೀತಿ ಮಾಡುವುದಕ್ಕಿಂತ ತಾಲ್ಲೂಕು ಪಂಚಾಯಿತಿ ವ್ಯವಸ್ಥೆಯನ್ನು ರದ್ದುಪಡಿಸುವುದು ಉತ್ತಮ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.