ADVERTISEMENT

3ನೇ ವರ್ಷವೂ ಕೊಡಗಿನಲ್ಲಿ ದುರಂತ: ಬ್ರಹ್ಮಗಿರಿಯಲ್ಲಿ ಅರ್ಚಕ ಕುಟುಂಬವೇ ಕಣ್ಮರೆ

ಪ್ರತಿವರ್ಷ ಜಿಲ್ಲೆಯ ಒಂದೊಂದು ಕಡೆ ಭೂಕುಸಿತ

ಅದಿತ್ಯ ಕೆ.ಎ.
Published 6 ಆಗಸ್ಟ್ 2020, 8:35 IST
Last Updated 6 ಆಗಸ್ಟ್ 2020, 8:35 IST
ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಭೂಕುಸಿತವಾಗಿರುವ ದೃಶ್ಯ
ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಭೂಕುಸಿತವಾಗಿರುವ ದೃಶ್ಯ   

ಮಡಿಕೇರಿ: ಮಹಾಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ಕಾಫಿ ನಾಡು ಕೊಡಗು ಜಿಲ್ಲೆಯು ಸತತ ಮೂರನೇ ವರ್ಷವೂ ತತ್ತರಿಸಿ ಹೋಗಿದೆ. ಪ್ರತಿ ವರ್ಷವೂ ಒಂದೊಂದು ಭಾಗದಲ್ಲಿ ಭೂಕುಸಿತ ಪ್ರಕರಣಗಳು ನಡೆಯುತ್ತಿರುವುದು, ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ.

2018ರಲ್ಲಿ ಮಡಿಕೇರಿ ಹಾಗೂ ಸೋಮವಾರಪೇಟೆಯ ಸುತ್ತಮುತ್ತ ದುರಂತಗಳು ಸಂಭವಿಸಿದ್ದವು. ಜಲಸ್ಫೋಟಕ್ಕೆ ಬೆಟ್ಟಗಳು ಕರಗಿ ನೀರಾಗಿ ಸಾವು, ನೋವಿಗೆ ಕಾರಣವಾಗಿತ್ತು. 2019ರಲ್ಲಿ ವಿರಾಜಪೇಟೆ ಹಾಗೂ ಗೋಣಿಕೊಪ್ಪಲಿನಲ್ಲಿ ಪ್ರವಾಹ ಬಂದಿತ್ತು. ವಿರಾಜಪೇಟೆ ತಾಲ್ಲೂಕಿನ ತೋರ ಗ್ರಾಮದಲ್ಲಿ ಭೂಕುಸಿತವಾಗಿ ಹಲವರು ಭೂಸಮಾಧಿ ಆಗಿದ್ದರು.

ಈ ವರ್ಷವೂ ಕೊಡಗಿನ ಪವಿತ್ರ ಸ್ಥಳ, ನಾಡಿನ ಜೀವನದಿ ಉಗಮ ಸ್ಥಳವಾದ ತಲಕಾವೇರಿಯಲ್ಲಿಯೇ ಬ್ರಹ್ಮಗಿರಿ ಬೆಟ್ಟವು ಕುಸಿದು ಅರ್ಚಕ ಕುಟುಂಬವೇ ನಾಪತ್ತೆಯಾಗಿದೆ. ಇನ್ನೂ ಕಾರ್ಯಾಚರಣೆ ಸಾಧ್ಯವಾಗಿಲ್ಲ. ಐದರಿಂದ ಆರು ಮಂದಿಗೆ ಕಣ್ಮರೆಯಾಗಿರುವ ಶಂಕೆಯಿದೆ.

ADVERTISEMENT

ಬ್ರಹ್ಮಗಿರಿಯೇ ಕುಸಿದಾಗ!

ಬ್ರಹ್ಮಗಿರಿಯನ್ನು ಜಿಲ್ಲೆಯಲ್ಲಿ ಪುಣ್ಯವಾದ ಸ್ಥಳ ಎಂಬ ನಂಬಿಕೆಯಿದೆ. ಯಾವ ಬೆಟ್ಟಗಳು ಕುಸಿದರೂ ಈ ಬೆಟ್ಟಕ್ಕೆ ಏನೂ ಆಗುವುದಿಲ್ಲ ಎಂಬ ನಂಬಿಕೆಯಿತ್ತು. ಈ ಬೆಟ್ಟವು ಕಲ್ಲುಗಳಿಂದ ಆವೃತವಾದ ಪ್ರದೇಶ. ಆದರೆ, 2019ರಲ್ಲಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆಗ ಎಚ್ಚೆತ್ತ ಜಿಲ್ಲಾಡಳಿತ ಅರ್ಚಕ ಕುಟುಂಬಕ್ಕೆ ಅಲ್ಲಿಂದ ಸ್ಥಳಾಂತರಗೊಳ್ಳುವಂತೆ ನೋಟಿಸ್‌ ಜಾರಿ ಮಾಡಿತ್ತು. ಅದರಲ್ಲಿ ಒಂದು ಕುಟುಂಬ ಮಾತ್ರ ಭಾಗಮಂಡಲದಲ್ಲಿ ನೂತನ ಮನೆ ನಿರ್ಮಿಸಿಕೊಂಡು ವಾಸ್ತವ್ಯ ಹೂಡಿತ್ತು. ಆದರೆ, ಪ್ರಧಾನ ಅರ್ಚಕ ನಾರಾಯಣ ಆಚಾರ್‌ ಕುಟುಂಬ ಅಲ್ಲಿಯೇ ನೆಲೆಸಿತ್ತು.

ಹಲವು ವರ್ಷಗಳಿಂದ ತಲಕಾವೇರಿ ತೀರ್ಥೋದ್ಭವ ಹಾಗೂ ಪ್ರಮುಖ ಪೂಜೆಗಳಲ್ಲಿ ನಾರಾಯಣ ಆಚಾರ್‌ ಪ್ರಮುಖ ಪಾತ್ರ ವಹಿಸುತ್ತಿದ್ದರು. ನಾಡಿನ ಗಣ್ಯರು ಯಾರೇ ಪೂಜೆಗೆ ಬಂದರೂ ಅವರ ನೇತೃತ್ವದಲ್ಲಿಯೇ ಪೂಜಾ ಕಾರ್ಯಗಳು ನಡೆಯುತ್ತಿದ್ದವು. ಕ್ಷೇತ್ರದೊಂದಿಗೆ ಅವರಿಗೆ ಭಾವನಾತ್ಮಕ ಸಂಬಂಧವಿತ್ತು. ಅದೇ ಕಾರಣಕ್ಕೆ ಅವರು ಅಲ್ಲಿಂದ ಸ್ಥಳಾಂತರಕ್ಕೆ ಹಿಂದೇಟು ಹಾಕಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.

ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣ ಆಚಾರ್, ಅವರ ಪತ್ನಿ, ಆನಂದತೀರ್ಥ ಮತ್ತು ಇಬ್ಬರು ಅರ್ಚಕರು ಸೇರಿದಂತೆ ಐವರು ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಎನ್‌ಡಿಆರ್‌ಎಫ್‌ ತಂಡ, ಪೊಲೀಸ್‌ ತಂಡ, ಅಗ್ನಿಶಾಮಕ ದಳ ಹಾಗೂ ಕಂದಾಯ ಇಲಾಖೆಗೆ ಪ್ರತಿಕೂಲ ಹವಾಮಾನದಿಂದ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ಮಂಜು ಮುಸುಕಿದ ವಾತಾವರಣ, ಚಳಿ, ಭಾರಿ ಮಳೆ, ಮಣ್ಣು ಸಡಿಲಗೊಂಡು ಪದೇ ಪದೇ ಕುಸಿಯುತ್ತಿರುವ ಪರಿಣಾಮ ರಕ್ಷಣಾ ಕಾರ್ಯಾಚರಣೆ ಸವಾಲಾಗಿದೆ. ಕಳೆದ ವರ್ಷವೂ ವಿರಾಜಪೇಟೆ ತಾಲ್ಲೂಕಿನ ತೋರಾದಲ್ಲಿ ಭೀಕರ ಕುಸಿತ ಸಂಭವಿಸಿ, 15 ದಿನಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು. ಕೊನೆಗೂ ಕೆಲವರ ಮೃತದೇಹ ಸಿಕ್ಕಿರಲಿಲ್ಲ.

ಸ್ಥಳಾಂತರವಾಗಿದ್ದರೆ?
ನಾಲ್ಕು ದಿನಗಳ ಹಿಂದೆ ಬೆಂಗಳೂರಿಗೆ ನಾರಾಯಣ ಆಚಾರ್‌ ವಾಪಸ್‌ ಬಂದಿದ್ದರು. ಬಂದ ಬಳಿಕ ಭಾಗಮಂಡಲ ಹಾಗೂ ತಲಕಾವೇರಿ ಭಾಗದಲ್ಲಿ ಮಳೆ ತೀವ್ರವಾದ ಮೇಲೆ ಮನೆಯಲ್ಲೇ ಉಳಿದಿದ್ದರು. ಇನ್ನು ಬುಧವಾರ ಬೆಳಿಗ್ಗೆ ತಲಕಾವೇರಿ ಕ್ಷೇತ್ರಕ್ಕೆ ತೆರಳಿ ಮಳೆಯಲ್ಲೇ ‘ವರುಣನ ಆರ್ಭಟ’ ತಣ್ಣಗೆ ಆಗಲೆಂದು ಪೂಜೆ ಸಲ್ಲಿಸಿ, ವಾಪಸ್‌ ಬಂದಿದ್ದರು.

ಕಾರ್ಯಾಚರಣೆ ತಂಡಕ್ಕೆ ಸಿಕ್ಕಿದ್ದು
ದಾರು ಕಿ.ಮೀ ಬೆಟ್ಟದ ಸಾಲು ಮೇಲಿಂದ ಕೆಳಕ್ಕೆ ಕುಸಿದಿದ್ದು, ಎರಡು ಮನೆಗಳನ್ನು ಸಂಪೂರ್ಣ ಹೊತ್ತೊಯ್ದಿದೆ. ಮನೆಗಳ ಕುರುಹು ಸಿಗದ ಸ್ಥಿತಿಯಿದೆ. ಅಲ್ಲಲ್ಲಿ ಪಾತ್ರೆಗಳು ಹಾಗೂ ಹೊದಿಕೆ ಬಿದ್ದಿರುವ ದೃಶ್ಯ ಕಂಡುಬಂತು.

ಕಾರುಗಳೂ ಭೂಸಮಾಧಿ
ನಾರಾಯಣ್‌ ಆಚಾರ್‌ ಅವರಿಗೆ ಎರಡು ಕಾರು ಹಾಗೂ ಬೈಕ್‌ಗಳೂ ಭೂಸಮಾಧಿಯಾಗಿವೆ. ಅವುಗಳು ಎಲ್ಲಿಗೆ ಹೋಗಿವೆ ಎಂಬ ಕುರುಹು ಇಲ್ಲವಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ತಲಕಾವೇರಿ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿತ್ತು. ಅದು ಸಹ ಮುನ್ಸೂಚನೆ ಆಗಿತ್ತು.

ಸಣ್ಣಪುಟ್ಟ ಕುಸಿತ
ಇತರೆ ಕಡೆಗಳಲ್ಲೂ ಸಣ್ಣಪುಟ್ಟ ಭೂಕುಸಿತ ಸಂಭವಿಸಿದೆ. ಮಳೆ ಆರ್ಭಟಿಸಿದರೆ ಮತ್ತೆ 2018ರ ದುರಂತವೇ ಮರುಕಳುಹಿಸುವ ಎಲ್ಲ ಸಾಧ್ಯತೆಗಳಿವೆ.

ಭಾಗಮಂಡಲ – ಕರಿಕೆ ಮಾರ್ಗದ ಪಟ್ಟಿಘಾಟ್‌ ಬಳಿ ರಸ್ತೆಯ ಬದಿ ಮಣ್ಣು ಕುಸಿದಿತ್ತು. ಅದನ್ನು ತೆರವು ಮಾಡಲಾಗಿದೆ. ಮಡಿಕೇರಿ – ಕುಟ್ಟ ಮಾರ್ಗದಲ್ಲೂ ಭೂಕುಸಿತವಾಗಿತ್ತು. ಮಡಿಕೇರಿಯ ಸಂಪಿಗೆ ಕಟ್ಟೆಯ ಬಳಿಯೂ ಮಳೆಗೆ ಗುಡ್ಡ ಕುಸಿದಿತ್ತು. ಕತ್ತಲೆಕಾಡು ಬಳಿ ರಸ್ತೆ ಕೊಚ್ಚಿ ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.