ADVERTISEMENT

ಪೊಲೀಸ್ ಅಧಿಕಾರಿಗಳಿಗೆ ವಿದೇಶದಲ್ಲಿ ತರಬೇತಿ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 11:45 IST
Last Updated 3 ನವೆಂಬರ್ 2019, 11:45 IST

ಬೆಳಗಾವಿ: ‘ಪೊಲೀ‌ಸ್‌ ಅಧಿಕಾರಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಅರಿತುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಅವರಿಗೆ ಅಮೆರಿಕ, ಆಸ್ಟ್ರೇಲಿಯಾ, ಸ್ಕಾಟ್ಲೆಂಡ್ ಮೊದಲಾದ ವಿದೇಶಗಳಲ್ಲಿ ವಿಶೇಷ ತರಬೇತಿ ಕೊಡಿಸಲು ಯೋಜಿಸಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಾಲ್ಲೂಕಿನ ಹಿರೇಬಾಗೇವಾಡಿ ಪೊಲೀಸ್ ಠಾಣೆ ಆವರಣದಲ್ಲಿ ₹ 6.64 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 36 ಪೊಲೀಸ್ ವಸತಿಗೃಹಗಳನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮುಂದಿನ 3 ರ್ಷಗಳಲ್ಲಿ 16ಸಾವಿರ ಸಿಬ್ಬಂದಿ ಹಾಗೂ ಸಾವಿರಕ್ಕೂ ಅಧಿಕ ಪಿಎಸ್‌ಐ ಹುದ್ದೆಗಳ ನೇಮಕಾತಿ ಗುರಿ ಹೊಂದಲಾಗಿದೆ. ತಂತ್ರಜ್ಞಾನಗಳು ಬದಲಾದಂತೆ ಅಪರಾಧದ ಸ್ವರೂಪವೂ ಬದಲಾಗುತ್ತಿದೆ. ಅದಕ್ಕೆ ಅನುಗುಣವಾಗಿ ತನಿಖೆ ನಡೆಸುವುದಕ್ಕಾಗಿ ಸೈಬರ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುತ್ತಿದೆ. ಪೊಲೀಸ್ ವ್ಯವಸ್ಥೆ ಜನಸ್ನೇಹಿಗೊಳಿಸಲಾಗುತ್ತಿದೆ. ಅಪರಾಧಗಳ ತನಿಖೆಯ ಸ್ವರೂಪದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ತರಲಾಗುತ್ತಿದೆ. ವಿಶ್ವದಲ್ಲೇ ಶ್ರೇಷ್ಠ ಪೊಲೀಸ್ ವ್ಯವಸ್ಥೆ ರೂಪಿಸುವ ಉದ್ದೇಶ ಹೊಂದಲಾಗಿದೆ’ ಎಂದರು.

ADVERTISEMENT

‘ಹಳೆ ಠಾಣೆಗಳನ್ನು ಆಧುನೀಕರಣಗೊಳಿಸಲು ಪ್ರಸ್ತಾವ ಬಂದರೆ, ಮುಂದಿನ ಬಜೆಟ್‌ನಲ್ಲಿ ಅನುದಾನ ನಿಗದಿಪಡಿಸುವಂತೆ ಮುಖ್ಯಮಂತ್ರಿಯನ್ನು ಕೋರಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.