ADVERTISEMENT

ಒಂದೇ ಗಂಟೆಯಲ್ಲಿ ವರ್ಗಾವಣೆ ಮಾರ್ಪಾಡು

ನಿಯಮಾವಳಿ ಉಲ್ಲಂಘಿಸಿ ಇಬ್ಬರು ಮುಖ್ಯ ಎಂಜಿನಿಯರ್‌ ವರ್ಗ

ಮಂಜುನಾಥ್ ಹೆಬ್ಬಾರ್‌
Published 24 ಡಿಸೆಂಬರ್ 2018, 2:39 IST
Last Updated 24 ಡಿಸೆಂಬರ್ 2018, 2:39 IST
   

ಬೆಂಗಳೂರು: ಇಬ್ಬರು ಮುಖ್ಯ ಎಂಜಿನಿಯರ್‌ಗಳ ವರ್ಗಾವಣೆ ಆದೇಶ ಹೊರಡಿಸಿದ ಒಂದೇ ಗಂಟೆಯಲ್ಲೇ ರಾಜ್ಯ ಸರ್ಕಾರ ಮಾರ್ಪಾಡು ಮಾಡಿದೆ. ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಹಸ್ತಕ್ಷೇಪದಿಂದ ಆದೇಶ ಬದಲು ಮಾಡಲಾಗಿದೆ ಎಂಬ ಆಕ್ಷೇಪ ಕೇಳಿಬಂದಿದೆ.

ಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಕೆ. ಬಾಲಕೃಷ್ಣ ಅವರನ್ನು ತುಮಕೂರಿನ ಹೇಮಾವತಿ ನಾಲಾ ವಲಯಕ್ಕೆ ವರ್ಗಾಯಿಸಿಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ ಶುಕ್ರವಾರ ಆದೇಶ ಹೊರಡಿಸಿತ್ತು. ಅಲ್ಲಿದ್ದ ಮುಖ್ಯ ಎಂಜಿನಿಯರ್‌ ಎಚ್.ಆರ್‌.ರಾಮಕೃಷ್ಣ ಅವರನ್ನು ಸಣ್ಣ ನೀರಾವರಿ ಇಲಾಖೆಯ (ಉತ್ತರ ವಲಯ) ಮುಖ್ಯ ಎಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಿತು.

‘ಇದಾದ ಒಂದೇ ಗಂಟೆಯಲ್ಲಿ ಈ ಆದೇಶವನ್ನು ಇಲಾಖೆ ಮಾರ್ಪಡಿಸಿತು. ಎಚ್‌.ಆರ್‌.ರಾಮಕೃಷ್ಣ ಅವರನ್ನು ಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕರನ್ನಾಗಿ ನೇಮಿಸಿತು. ಎಚ್‌.ಡಿ.ರೇವಣ್ಣ ಮೌಖಿಕ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಯಿತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಒಪ್ಪಿಗೆ ಪಡೆಯದೆ ಇದನ್ನು ಮಾಡಲಾಗಿದೆ. ಘಟನೋತ್ತರ ಅನುಮೋದನೆಗಾಗಿ ಮುಖ್ಯಮಂತ್ರಿ ಸಚಿವಾಲಯಕ್ಕೆ ಭಾನುವಾರ ಕಡತ ಕಳುಹಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಕರ್ನಾಟಕ ನೀರಾವರಿ ನಿಗಮದ ಕಲಬುರ್ಗಿ ನೀರಾವರಿ ಯೋಜನಾ ವಲಯದ ಮುಖ್ಯ ಎಂಜಿನಿಯರ್‌ ಆರ್‌.ಪಿ.ಕುಲಕರ್ಣಿ ಅವರನ್ನು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಮುಖ್ಯ ಎಂಜಿನಿಯರ್‌ ಸ್ಥಾನಕ್ಕೆ ಈ ತಿಂಗಳ 14ರಂದು ನೇಮಿಸಲಾಯಿತು. ಈ ವರ್ಗಾವಣೆಯನ್ನು ಇದೇ 20ರಂದು ರದ್ದುಪಡಿಸಲಾಯಿತು. ರೇವಣ್ಣ ಅವರು ಅಧಿಕಾರ ವ್ಯಾಪ್ತಿ ಮೀರಿ ಈ ವರ್ಗಾವಣೆ ಮಾಡಿಸಿರುವುದಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ’ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

‘ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಇಲಾಖಾ ಮುಖ್ಯಸ್ಥರು ಹಾಗೂ ಮುಖ್ಯ ಎಂಜಿನಿಯರ್‌ಗಳ ವರ್ಗಾವಣೆಯು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಆ ಅಧಿಕಾರಿ ಎಷ್ಟು ವರ್ಷಗಳಿಂದ ಅಲ್ಲಿದ್ದರು, ಯಾವ ಕಾರಣಕ್ಕಾಗಿ ವರ್ಗ ಮಾಡಲಾಗುತ್ತದೆ ಎಂಬಿತ್ಯಾದಿ ಅಂಶಗಳನ್ನು ವರ್ಗಾವಣೆಯ ಕಡತದಲ್ಲಿ ನಮೂದಿಸಬೇಕು. ವರ್ಗಾವಣೆಗೆ ಮುನ್ನ ಮುಖ್ಯಮಂತ್ರಿ ಒಪ್ಪಿಗೆ ಪಡೆಯಬೇಕು. ಆದರೆ, ಈ ಪ್ರಕರಣದಲ್ಲಿ ಸಚಿವರ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ವರ್ಗಾವಣೆ ಮಾಡಲಾಗಿದೆ’ ಎಂಬ ಆರೋಪ ಕೇಳಿ ಬಂದಿದೆ.

‘ರಾಜ್ಯ ಸರ್ಕಾರ ಮನಬಂದಂತೆ ಅಧಿಕಾರಿಗಳ ವರ್ಗಾವಣೆ ಮಾಡುತ್ತಿದೆ. ರಾಜ್ಯದಲ್ಲಿ ಕಾನೂನು ಎಂಬುದು ಇದೆಯೇ ಇಲ್ಲವೇ’ ಎಂದು ಹೈಕೋರ್ಟ್‌ ಈ ವರ್ಷದ ಜನವರಿಯಲ್ಲಿ ಖಾರವಾಗಿ ಪ್ರಶ್ನಿಸಿತ್ತು.

‘ರಾಜ್ಯ ಸರ್ಕಾರವು ಅಧಿಕಾರಿಗಳ ವರ್ಗಾವಣೆಯನ್ನು ದಂಧೆಯನ್ನಾಗಿ ಮಾಡಿಕೊಂಡಿದೆ. ಈ ಸರ್ಕಾರಕ್ಕೆ ಹೇಳೋರು ಕೇಳೋರು ಇಲ್ಲದಂತಾಗಿದೆ’ ಎಂದು ಹೈಕೋರ್ಟ್‌ ಈ ವರ್ಷದ ನ. 5ರಂದು ಛೀಮಾರಿ ಹಾಕಿತ್ತು. ವರ್ಗಾವಣೆಯಲ್ಲಿ ನಿಯಮ ಪಾಲನೆ ಆಗುತ್ತಿಲ್ಲ ಎಂದು ಕಿಡಿಕಾರಿತ್ತು. ಆ ಬಳಿಕವೂ ರಾಜ್ಯ ಸರ್ಕಾರ ಮನ ಬಂದಂತೆ ವರ್ಗಾವಣೆ ಮಾಡುತ್ತಿದೆ ಎಂದು ಹಲವು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.