ADVERTISEMENT

‘ಹುದ್ದೆ ತೋರಿಸಿ ಅಧಿಕಾರಿಗಳ ವರ್ಗಾಯಿಸಿ’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 20:03 IST
Last Updated 8 ನವೆಂಬರ್ 2018, 20:03 IST

ಬೆಂಗಳೂರು: ಸರ್ಕಾರಿ ಅಧಿಕಾರಿಗಳಿಗೆ ಹುದ್ದೆ ತೋರಿಸಿ ವರ್ಗಾಯಿಸಬೇಕು ಎಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ನಿರ್ದೇಶನ ನೀಡಿದ್ದಾರೆ.

2018–19ನೇ ಸಾಲಿನಲ್ಲಿ ವಿವಿಧ ಇಲಾಖೆಗಳಲ್ಲಿ ಶೇ 4ರಷ್ಟು ವರ್ಗಾವಣೆ ಮಾಡಲು ಒಪ್ಪಿಗೆ ನೀಡಲಾಗಿತ್ತು. ಈ ಪ್ರಕ್ರಿಯೆಯನ್ನು ಆಗಸ್ಟ್‌ 10ರೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಆ ಬಳಿಕದ ವರ್ಗಾವಣೆಗೆ ಮುಖ್ಯಮಂತ್ರಿ ಅನುಮೋದನೆ ಕಡ್ಡಾಯ ಎಂದು ತಿಳಿಸಲಾಗಿತ್ತು.

ಆ ನಂತರವೂ ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ವರ್ಗಾವಣೆ ಪರ್ವ ಮುಂದುವರಿದಿತ್ತು. ಸ್ಥಳ ನಿಯುಕ್ತಿ ಮಾಡದೆ ಅನೇಕ ಅಧಿಕಾರಿಗಳನ್ನು ವರ್ಗಾಯಿಸಲಾಗಿತ್ತು.

ADVERTISEMENT

‘ಸರ್ಕಾರಿ ನೌಕರರು ಕಡ್ಡಾಯ ನಿರೀಕ್ಷಣೆಯಲ್ಲಿ ಉಳಿಯುವಂತಾಗಬಾರದು ಎಂದು 2013ರ ವರ್ಗಾವಣೆ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಕೆಲವು ಇಲಾಖೆಗಳು ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ ಮಾಡುತ್ತಿಲ್ಲ. ಇಂಥ ವರ್ಗಾವಣೆಗಳಿಗೆ ನ್ಯಾಯಾಲಯಗಳು ತಡೆಯಾಜ್ಞೆ ನೀಡುತ್ತಿವೆ.

ಅಲ್ಲದೆ, ಅಂತಹ ಅಧಿಕಾರಿಗೆ ಕಡ್ಡಾಯ ಕಾಯುವ ಅವಧಿ ಮಂಜೂರು ಮಾಡಬೇಕಾಗುತ್ತದೆ. ಇದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು’ ಎಂದು ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.