ADVERTISEMENT

ಶಿಕ್ಷಕರ ವರ್ಗಾವಣೆ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ: ಶಿಕ್ಷಣ ಇಲಾಖೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 19:00 IST
Last Updated 5 ಫೆಬ್ರುವರಿ 2019, 19:00 IST

ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಇಲಾಖೆಯಲ್ಲಿ ಈವರೆಗೂ ಪ್ರಾಥಮಿಕ ಹಂತ ಚರ್ಚೆಯೂ ನಡೆದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬರುವ ಶೈಕ್ಷಣಿಕ ವರ್ಷದ ಆರಂಭದ ಮೊದಲು ತಡೆ ಹಿಡಿಯಲಾಗಿರುವ ವರ್ಗಾವಣೆ ಪ್ರಕ್ರಿಯೆ ನಡೆಸುವ ಉದ್ದೇಶವಿದೆ. ಆದರೆ, ಚುನಾವಣೆ ಘೋಷಣೆಗೂ ಮೊದಲು ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡುವ ಸಾಧ್ಯತೆ ಇಲ್ಲ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಚುನಾವಣಾ ಆಯೋಗ ಮಾರ್ಚ್‌ ಮೊದಲ ವಾರ ಲೋಕಸಭಾ ಚುನಾವಣೆ ದಿನಾಂಕ ಪ್ರಕಟಣೆಯ ಅಧಿಸೂಚನೆ ಹೊರಡಿಸಲಿದೆ. ಅಲ್ಲದೆ, ಮಾರ್ಚ್‌ 1 ರಿಂದ ದ್ವಿತೀಯ ಪಿಯುಸಿ ಮತ್ತು ಮಾರ್ಚ್‌ 21 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಲಿವೆ. ಫೆಬ್ರುವರಿಯಲ್ಲಿ ಈ ಪರೀಕ್ಷೆಗಳಿಗೆ ಶಿಕ್ಷಣ ಇಲಾಖೆ ತಯಾರಿ ನಡೆಸುತ್ತಿರುವಾಗ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದರೆ ಜೇನುಗೂಡಿಗೆ ಕೈ ಹಾಕಿದಂತಾಗುತ್ತದೆ ಎಂದು ಅವರು ಹೇಳಿದರು.

ADVERTISEMENT

ಚುನಾವಣಾ ದಿನಾಂಕಗಳ ಅಧಿಸೂಚನೆ ಹೊರಡಿಸುವುದಕ್ಕೆ ಮೊದಲು ವರ್ಗಾವಣೆಗೆ ಆದೇಶ ಹೊರಡಿಬಹುದು. ಈಗಾಗಲೇ ಕೌನ್ಸೆಲಿಂಗ್‌ನಲ್ಲಿ ಆಯ್ಕೆ ಆಗಿರುವವರಿಗೆ ಆದೇಶ ಪತ್ರ ನೀಡಿದರೆ ಶಿಕ್ಷಕ ವರ್ಗದಲ್ಲಿ ಗೊಂದಲ ಸೃಷ್ಟಿ ಆಗುವ ಸಾಧ್ಯತೆ ಇರುತ್ತದೆ. ಚುನಾವಣೆ ಸಂದರ್ಭದಲ್ಲಿ ಈ ಗೊಂದಲ ಸೃಷ್ಟಿಸುವುದಕ್ಕಿಂತ ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕವೇ ಅಂದರೆ, ಏಪ್ರಿಲ್‌ ಕೊನೆಯಲ್ಲಿ ವರ್ಗಾವಣೆಗೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದರು.

ಲೋಕಸಭಾ ಚುನಾವಣೆಗೆ ಮುನ್ನ ಶಿಕ್ಷಕರ ವರ್ಗಾವಣೆ ಮಾಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಲೋಕಸಭೆ ಚುನಾವಣೆ ಬಳಿಕವೇ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಶಿಕ್ಷಣ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿಯವರ ಕಚೇರಿ ಮೂಲಗಳೂ ತಿಳಿಸಿವೆ.

ಮೂಗಿಗೆ ತುಪ್ಪ:
ಸರ್ಕಾರ ತಕ್ಷಣವೇ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಈ ಹಿಂದೆ ಎರಡು ಬಾರಿ ಆದೇಶ ಹೊರಡಿಸಿ ವರ್ಗಾವಣೆ ಆದೇಶ ಪತ್ರ ನೀಡುವುದಕ್ಕೆ ಮೊದಲು ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ವರ್ಗಾವಣೆ ಕೋರಿದವರಲ್ಲಿ ಶೇ 80 ರಷ್ಟು ಶಿಕ್ಷಕರಿಗೆಕೌನ್ಸೆಲಿಂಗ್‌ ಮೂಲಕ ಆಯ್ಕೆ ಮಾಡಲಾಗಿದೆ. ಆದರೆ, ಆದೇಶ ಪತ್ರ ನೀಡಿಲ್ಲ ಎಂದು ಕರ್ನಾಟಕ ರಾಜ್ಯ ಶಿಕ್ಷಕರ ಹೋರಾಟ ಸಮಿತಿ ಅಧ್ಯಕ್ಷ ಮಾಲತೇಶ್‌ ಬಬ್ಬಜ್ಜಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.