ADVERTISEMENT

ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ ಸಹಸ್ರಾರು ಮರಗಳ ಹನನ

ರಾಷ್ಟ್ರೀಯ ಹೆದ್ದಾರಿ–173 (ಕೆ.ಎಂ ರಸ್ತೆ) ವಿಸ್ತರಣೆ ಕಾಮಗಾರಿ

ಬಿ.ಜೆ.ಧನ್ಯಪ್ರಸಾದ್
Published 25 ಜನವರಿ 2020, 19:40 IST
Last Updated 25 ಜನವರಿ 2020, 19:40 IST
ಚಿಕ್ಕಮಗಳೂರು ಜಿಲ್ಲೆಯ ಉದ್ದೆಬೋರನಹಳ್ಳಿ ಬಳಿ ಕೆ.ಎಂ.ರಸ್ತೆ ಬದಿಯ ಆಲದ ಮರದ ಹನನ
ಚಿಕ್ಕಮಗಳೂರು ಜಿಲ್ಲೆಯ ಉದ್ದೆಬೋರನಹಳ್ಳಿ ಬಳಿ ಕೆ.ಎಂ.ರಸ್ತೆ ಬದಿಯ ಆಲದ ಮರದ ಹನನ   

ಚಿಕ್ಕಮಗಳೂರು: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌)–173 ವಿಸ್ತರಣೆಗೆ ರಸ್ತೆಯ ಇಕ್ಕೆಲದ ಮರಗಳ ಮಾರಣಹೋಮ ಭರದಿಂದ ಸಾಗಿದೆ. ಈಗ ಎರಡನೇ ಹಂತದಲ್ಲಿ 2,318 ಮರಗಳ ಕಡಿಯಲು ಅರಣ್ಯ ಇಲಾಖೆ ಅಸ್ತು ನೀಡಿದೆ.

ಮೊದಲ ಹಂತದಲ್ಲಿ 1,137 ಮರಗಳನ್ನು ಕಡಿಯಲು ಅನುಮೋದನೆ ನೀಡಿದ್ದು, ಈ ಪೈಕಿ, 816 ವೃಕ್ಷಗಳನ್ನು ಕಡಿಯಲಾಗಿದೆ. ಎರಡನೇ ಹಂತದ ಕಡಿಯುವ ಕಾರ್ಯ ಆರಂಭವಾಗಿದೆ. ಈ ರಸ್ತೆಯಲ್ಲಿ ಈಗ ಆಲ, ಅರಳಿ, ಮಾವು, ಬೇವು, ಹುಣಸೆ, ಹೊನ್ನೆ ಮೊದಲಾದವುಗಳ ಹನನದ್ದೇ ಸದ್ದು. ಮರಗಳು ‘ಮಾಯ’ವಾಗಿ ಮಾರ್ಗ ಬಟಾಬಯಲಾಗುತ್ತಿದೆ.

ಕಡಿಯಲಾದ ಒಂದು ಮರದ ಬದಲಿಗೆ 10 ಗಿಡಗಳನ್ನು ನೆಟ್ಟು ಪೋಷಿಸಬೇಕೆಂಬ ಮಾರ್ಗಸೂಚಿ ಇದೆ. ಆದರೆ, ಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಂತಿಲ್ಲ. ಅದರಿಂದ ಜಾಗತಿಕ ತಾಪಮಾನ ಏರುತ್ತದೆ. ಕಡಿದ ಮರಗಳಿಗೆ ಪರ್ಯಾಯವಾಗಿ ಗಿಡಗಳನ್ನು ನೆಟ್ಟು ಪೋಷಿಸಲೇಬೇಕು ಎಂಬುದು ಪರಿಸರಾಸಕ್ತರ ಒತ್ತಾಯ.

ADVERTISEMENT

‘ರಾಷ್ಟ್ರೀಯ ಹೆದ್ದಾರಿ ಉಪವಿಭಾ ಗದ ವತಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಡೂರಿನಿಂದ– ಮೂಡಿಗೆರೆ ಹ್ಯಾಂಡ್‌ ಪೋಸ್ಟ್‌ವರೆಗಿನ 72 ಕಿ.ಮೀ ಉದ್ದದ ಈ ರಸ್ತೆಯ ಅಗಲ 14 ಮೀಟರ್‌ (ಶೋಲ್ಡರ್‌ ಸಹಿತ) ವಿಸ್ತರಣೆ ಮಾಡಲಾಗುತ್ತಿದೆ. ಈಗ ಕಡೂರಿನಿಂದ ಚಿಕ್ಕಮಗಳೂರು ತಾಲ್ಲೂಕಿನ ಮೂಗ್ತಿಹಳ್ಳಿವರೆಗೆ (45 ಕಿ.ಮೀ) ವಿಸ್ತರಣೆ ನಿಟ್ಟಿನಲ್ಲಿ ₹ 204 ಕೋಟಿ ಅನುದಾನ ಮಂಜೂರಾಗಿದೆ’ ಎಂದು ಉಪ ವಿಭಾಗದ ಎಂಜಿನಿಯರೊಬ್ಬರು ತಿಳಿಸಿದರು.

‘ಕಾಮಗಾರಿ ಬಳಿಕ ಸಸಿ ನೆಟ್ಟು ಪೋಷಣೆ’

ಮರಗಳ ಕಡಿಯುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಸಿ ಅನುಮೋದನೆ ನೀಡಲಾಗಿದೆ. ಪರ್ಯಾಯವಾಗಿ ಗಿಡಗಳನ್ನು ನೆಟ್ಟು ಬೆಳೆಸಲಾಗುವುದು ಎಂದು ಚಿಕ್ಕಮಗಳೂರು ಉಪ ಅರಣ್ಯಸಂರಕ್ಷಣಾಧಿಕಾರಿ ಎನ್‌.ಎಚ್. ಜಗನ್ನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಸ್ತೆ ಪಕ್ಕದ ಜಮೀನಿನಲ್ಲಿ ನೆಟ್ಟ ಗಿಡದ ಫಲ (ಹಣ್ಣು, ಕಾಯಿ...) ಆದಾಯ ರೈತನಿಗೆ, ವಾರಸುದಾರಿಕೆ ಇಲಾಖೆಗೆ ‘ಸೂತ್ರ’ ಅನ್ವಯಿಸಲಾಗುವುದು. ಗಿಡ ನೆಡುವ ಕಾರ್ಯವನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.