ADVERTISEMENT

ಸರ್ಕಾರ ಉರುಳಿಸಲು ಬಿಜೆಪಿ ಸಜ್ಜು; ಉಳಿಸಲು ‘ದೋಸ್ತಿ’ಗಳ ಪಣ

ಸೋಲಿನ ಕಹಿ ಮರೆತು ಒಟ್ಟಾಗಿ ಸಾಗಲು ‘ದೋಸ್ತಿ’ಗಳ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 24 ಮೇ 2019, 20:12 IST
Last Updated 24 ಮೇ 2019, 20:12 IST
   

ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದು ಮುಗಿದ ಅಧ್ಯಾಯ. ಆಗಿದ್ದು ಆಗಿ ಹೋಯಿತು. ಇನ್ನು ಮುಂದೆ ಎಲ್ಲವನ್ನೂ ಮರೆತು ಒಟ್ಟಾಗಿ ಸಾಗೋಣ’ ಎಂಬ ನಿರ್ಧಾರಕ್ಕೆ ಬಂದಿರುವ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಕೂಟದ ನಾಯಕರು, ಸರ್ಕಾರವನ್ನು ಉಳಿಸಿಕೊಳ್ಳುವ ಪಣ ತೊಟ್ಟಿದ್ದಾರೆ.

ತಲಾ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾದ ಸ್ಥಿತಿಯಿಂದಾಗಿ ದಿಕ್ಕೆಟ್ಟುಹೋಗಿರುವ ಮಿತ್ರಪಕ್ಷಗಳ ನಾಯಕರು ಗುರುವಾರ ರಾತ್ರಿ ಹಾಗೂ ಶುಕ್ರವಾರ ಸರಣಿ ಸಭೆ ನಡೆಸಿ ಈ ತೀರ್ಮಾನವನ್ನು ಘೋಷಿಸಿದರು.

ಈ ಬೆಳವಣಿಗೆ ಬೆನ್ನಲ್ಲೇ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ‘ಕಾವೇರಿ’ ನಿವಾಸಕ್ಕೆ ಸಂಜೆ ಭೇಟಿ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸರ್ಕಾರ ಮುಂದುವರಿಸಿಕೊಂಡು ಹೋಗಲು ಸಹಕಾರ ನೀಡುವಂತೆ ಕೋರಿದರು.

ADVERTISEMENT

ಸೋಲಿನ ಬೆನ್ನಲ್ಲೇ ಸಂಧಾನ: ಫಲಿತಾಂಶ ಹೊರಬೀಳುತ್ತಿದ್ದಂತೆ ಎಚ್‌.ಡಿ. ದೇವೇಗೌಡರ ಮನೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಗೃಹ ಸಚಿವ ಎಂ.ಬಿ. ಪಾಟೀಲರನ್ನು ಕಳುಹಿಸಿದ ಸಿದ್ದರಾಮಯ್ಯ ‘ಮೈತ್ರಿ’ ಉಳಿಸಿಕೊಳ್ಳುವ ಯತ್ನಕ್ಕೆ ನಾಂದಿ ಹಾಡಿದರು.

‘ಚುನಾವಣೆಯಲ್ಲಿ ನಾವು ಅಂದುಕೊಂಡಂತೆ ನಡೆದಿಲ್ಲ. ಎರಡೂ ಕಡೆಯವರಿಂದಲೂ ತಪ್ಪಾಗಿದೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮುಂದುವರಿಯಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸುವಂತೆ ಸಿದ್ದರಾಮಯ್ಯ ಸೂಚಿಸಿದ್ದಾರೆ’ ಎಂದು ಇಬ್ಬರು ನಾಯಕರು ತಿಳಿಸಿದರು. ಇದಕ್ಕೆ ದೇವೇಗೌಡರು ಸಹಮತ ಸೂಚಿಸಿದರು ಎಂದು ಮೂಲಗಳು ಹೇಳಿವೆ.

ಇದರ ಬೆನ್ನಲ್ಲೇ,ಕಾಂಗ್ರೆಸ್‌ ನಾಯಕರ ಸಭೆ ಹಾಗೂ ಅನೌಪಚಾರಿಕ ಸಚಿವ ಸಂಪುಟ ಸಭೆಗಳು ಪ‍್ರತ್ಯೇಕವಾಗಿ ನಡೆದವು. ಸಚಿವ ಸಂಪುಟ ಸಭೆಗೆ ಸಿದ್ದರಾಮಯ್ಯ ಅವರಿಗೂ ಆಮಂತ್ರಣ ನೀಡಲಾಗಿತ್ತು. ‘ಎಲ್ಲವನ್ನೂ ಸಚಿವರಿಗೆ ಹೇಳಿದ್ದೇನೆ. ನಾನು ಬರುವುದಿಲ್ಲ’ ಎಂದು ಸಿದ್ದರಾಮಯ್ಯ ಅವರು ತಮಗೆ ಕರೆ ಮಾಡಿದ್ದ ಕುಮಾರಸ್ವಾಮಿಗೆ ಹೇಳಿದರು.

‘ರಾಜ್ಯದ ಅಭಿವೃದ್ಧಿಯೊಂದೇ ನನ್ನ ಗುರಿ. ಎಲ್ಲ ಪ್ರಯತ್ನ ಮಾಡಿದರೂ ಚುನಾವಣೆಯಲ್ಲಿ ಫಲ ಸಿಕ್ಕಿಲ್ಲ. ನೀವೆಲ್ಲ ಬಯಸಿದರೆ ಹುದ್ದೆಯಲ್ಲಿ ಉಳಿಯುತ್ತೇನೆ. ಇಲ್ಲದಿದ್ದರೆ ಪದತ್ಯಾಗಕ್ಕೆಸಿದ್ಧ’ ಎಂದು ಕುಮಾರಸ್ವಾಮಿ ತಮ್ಮ ಸಚಿವ ಸಹೋದ್ಯೋಗಿಗಳಿಗೆ ಹೇಳಿದರು. ಯಾರೊಬ್ಬರೂ ಇದಕ್ಕೆ ಒಪ್ಪಲಿಲ್ಲಎಂದು ಮೂಲಗಳು ಹೇಳಿವೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜತೆಗೂ ಕುಮಾರಸ್ವಾಮಿ ದೂರವಾಣಿಯಲ್ಲಿ ಮಾತನಾಡಿದ್ದು, ಮೈತ್ರಿ ಸರ್ಕಾರ ಮುಂದುವರಿಸಿಕೊಂಡು ಹೋಗಲು ಅವರೂ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ಉರುಳಿಸಲು ಬಿಜೆಪಿ ಸಜ್ಜು

ವರ್ಷದ ಕೂಸು ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವನ್ನು ಕೆಡಹುವ ಯತ್ನವನ್ನು ಮುಂದುವರಿಸಲು ಬಿಜೆಪಿ ರಾಜ್ಯ ನಾಯಕರು ಯತ್ನ ಮುಂದುವರಿಸಿದ್ದು, ಇದೇ 31ರವರೆಗೆ ದುಡುಕದೇ ಸುಮ್ಮನಿರುವಂತೆ ಆ ಪಕ್ಷದ ವರಿಷ್ಠರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಇದೇ 23ರಂದು ಸರ್ಕಾರ ಬೀಳಲಿದೆ ಎಂದು ಹೇಳುತ್ತಿದ್ದ ಕಮಲ ಪಡೆಯ ನಾಯಕರು ಈಗ ಮೌನಕ್ಕೆ ಶರಣಾಗಿದ್ದಾರೆ.

‘ಲೋಕಸಭೆಯ ಫಲಿತಾಂಶವು ಮೈತ್ರಿಕೂಟವನ್ನು ಜನರು ತಿರಸ್ಕರಿಸಿರುವುದಕ್ಕೆ ದ್ಯೋತಕ. ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ನಾವು ಕಾದುನೋಡುತ್ತೇವೆ. ವರಿಷ್ಠರು ನೀಡುವ ಸೂಚನೆಯಂತೆ ಮುಂದುವರಿಯುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಪರೇಷನ್ ಕಮಲ ಹಾಗೂ ಸರ್ಕಾರ ಪತನದ ಯತ್ನಕ್ಕೆ ಕೈ ಹಾಕುವುದಿಲ್ಲ. ಇದೇ 29ರಂದು ದೆಹಲಿಗೆ ಹೋಗಲಿದ್ದೇನೆ. ಪಕ್ಷದ ವರಿಷ್ಠರಿಗೆ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿದ್ದೇನೆ’ ಎಂದು ಅವರು ಹೇಳಿದರು.

‘ಕಾಂಗ್ರೆಸ್‌–ಜೆಡಿಎಸ್‌ನ 10ಕ್ಕೂ ಹೆಚ್ಚು ಶಾಸಕರು ಸಂಪರ್ಕದಲ್ಲಿದ್ದಾರೆ. ಯಾವಾಗ ಬೇಕಾದರೂ ಅವರು ರಾಜೀನಾಮೆ ಕೊಟ್ಟು ಬರಬಹುದು. ಕೇಂದ್ರ ಸರ್ಕಾರ ರಚನೆಯಾಗುವವರೆಗೆ ಆಪರೇಷನ್ ಕಮಲ ಮಾಡಿದರೆ ರಾಷ್ಟ್ರಮಟ್ಟದಲ್ಲಿ ಮುಜುಗರ ಎದುರಿಸಬೇಕಾಗುತ್ತದೆ. ಹೀಗಾಗಿ ಅಲ್ಲಿಯವರೆಗೆ ಅಂತಹ ಯತ್ನಕ್ಕೆ ಕೈಹಾಕಕೂಡದು, ಹೇಳಿಕೆ ನೀಡಕೂಡದು ಎಂದು ಅಮಿತ್ ಷಾ ಕಟ್ಟಪ್ಪಣೆ ವಿಧಿಸಿದ್ದಾರೆ’ ಎಂದು ಮತ್ತೊಬ್ಬ ಹಿರಿಯ ನಾಯಕರು ಹೇಳಿದರು.

***

ಫಲಿತಾಂಶದ ಹಿನ್ನಡೆ ಬಗ್ಗೆ ಚರ್ಚಿಸಿದ್ದೇವೆ. ಇದು ಮೈತ್ರಿ ಸರ್ಕಾರದ ಮೇಲೆ ಪರಿಣಾಮ ಬೀರದು. ಸರ್ಕಾರ 4 ವರ್ಷ ಇರುತ್ತದೆ

–ಸಿದ್ದರಾಮಯ್ಯ,ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ

ಲೋಕಸಭೆ ಚುನಾವಣೆಯಲ್ಲಿ ಆಗಿದ್ದು ಆಗಿಹೋಗಿದೆ. ಇನ್ನು ಮುಂದೆ ಒಟ್ಟಾಗಿ ಸಾಗಿ ನಾಲ್ಕು ವರ್ಷ ಸರ್ಕಾರ ನಡೆಸಲು ತೀರ್ಮಾನಿಸಿದ್ದೇವೆ

–ಎಚ್. ವಿಶ್ವನಾಥ್,ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ

ರಮೇಶ ಜಾರಕಿಹೊಳಿ ಸದ್ಯದಲ್ಲಿಯೇ ಬಿಜೆಪಿ ಸೇರುವುದು ಗ್ಯಾರಂಟಿ. ಅವರ ಜೊತೆಗೆ ಕೆಲವು ಶಾಸಕರು ಕೂಡ ಬರುತ್ತಾರೆ.

–ಸುರೇಶ ಅಂಗಡಿ,ಬೆಳಗಾವಿ ಕ್ಷೇತ್ರದ ಬಿಜೆಪಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.