ADVERTISEMENT

ತುಮಕೂರು ಜೆಡಿಎಸ್‌ಗೆ: ಮುದ್ದಹನುಮೇಗೌಡರಿಗೆ ಮತ್ತೆ ಭ್ರಮನಿರಸನ

ರಾಮರಡ್ಡಿ ಅಳವಂಡಿ
Published 2 ಮೇ 2019, 10:40 IST
Last Updated 2 ಮೇ 2019, 10:40 IST
ಮುದ್ದಹನುಮೇಗೌಡ
ಮುದ್ದಹನುಮೇಗೌಡ   

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿರುವುದು ಜಿಲ್ಲೆಯ ಕಾಂಗ್ರೆಸ್‌ ಪಾಳಯದಲ್ಲಿ ದಿಗಿಲು ಹುಟ್ಟಿಸಿದೆ. ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಸಂಸದರೇ ಇರುವುದರಿಂದ ಈ ಕ್ಷೇತ್ರಕ್ಕೆ ಜೆಡಿಎಸ್ ಕೈ ಹಾಕುವುದಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ಮುಖಂಡರಿದ್ದರು. ಆದರೆ, ಜೆಡಿಎಸ್ ಪಟ್ಟು ಬಿಡದೇ ಕಿತ್ತುಕೊಂಡಿರುವುದು ಜಿಲ್ಲಾ ಕಾಂಗ್ರೆಸ್ ಬುಡವನ್ನೇ ಅಲುಗಾಡುವಂತೆ ಮಾಡಿದೆ.

ಉಪಮುಖ್ಯಮಂತ್ರಿ, ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದವರು, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ ಅವರಂತಹ ಅತ್ಯಂತ ಪ್ರಭಾವಿ ನಾಯಕರಿದ್ದಾಗ್ಯೂ ಜೆಡಿಎಸ್ ಕ್ಷೇತ್ರ ಕಿತ್ತುಕೊಂಡಿರುವುದು ಪಕ್ಷದ ಮುಖಂಡರು, ತಳಮಟ್ಟದ ಕಾರ್ಯಕರ್ತರಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ.

ಕ್ಷೇತ್ರ ಗಿಟ್ಟಿಸಿಕೊಂಡ ಉಮೇದಿಯಲ್ಲಿರುವ ಜೆಡಿಎಸ್‌ನ ಜಿಲ್ಲಾ ಮುಖಂಡರು ಈ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಲೆಕ್ಕಾಚಾರ ನಡೆಸುತ್ತಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೇ ಕಣಕ್ಕಿಳಿಯಲು ಕಸರತ್ತು ನಡೆಸುತ್ತಿದ್ದಾರೆ.

ADVERTISEMENT

ಗೌಡರು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಸ್ಪರ್ಧಿಸಿದರೆ ಚಿಕ್ಕನಾಯಕನಹಳ್ಳಿಯ ಮಾಜಿ ಶಾಸಕ ಬಿ.ಸುರೇಶ್ ಬಾಬು ಅಥವಾ ವಿರಮೇಶ್ ಬಾಬು ಇವರಿಬ್ಬರಲ್ಲಿ ಒಬ್ಬರನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದಾರೆ.

ಕೆಂಡಾಮಂಡಲ:ತುಮಕೂರು ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಹಿರಿಯ ಮುಖಂಡ ಕೆ.ಎನ್‌.ರಾಜಣ್ಣ ಗುಡುಗಿದ್ದಾರೆ.

ಹಾಲಿ ಸಂಸದರಿಗೆ ಟಿಕೆಟ್ ಕೊಡದೇ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದು ಪಕ್ಷಕ್ಕೆ ದೊಡ್ಡ ಹೊಡೆತ ಎಂದು ಕಾಂಗ್ರೆಸ್ ಯುವ ಮುಖಂಡರಾದ ಸಾಸಲು ಸತೀಶ್, ರಾಯಸಂದ್ರ ರವಿಕುಮಾರ್ ಹೇಳಿದ್ದಾರೆ.

ಮುದ್ದಹನುಮೇಗೌಡರಿಗೆ ಮತ್ತೆ ಭ್ರಮನಿರಸನ
ತಮ್ಮ ವಿಶಿಷ್ಟ ವ್ಯಕ್ತಿತ್ವದ ಮೂಲಕ ಜನಮನ್ನಣೆ ಗಳಿಸಿದ್ದರೂ ರಾಜಕೀಯಜೀವನದ ಹಾವು ಏಣಿಯಾಟದಲ್ಲೇ ಅಸ್ತಿತ್ವ ಕಂಡುಕೊಂಡು ಬಂದಎಸ್‌.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ಕೈ ತಪ್ಪಿರುವುದು ಮತ್ತೆ ಭ್ರಮನಿರಸನವಾಗಿದೆ.

1989 ಹಾಗೂ 2013ರಲ್ಲಿ ಕೈಯಲ್ಲಿ ಬಿ.ಫಾರಂ ಇದ್ದಾಗಲೂ ಸ್ಪರ್ಧಿಸಲು ಆಗಿರಲಿಲ್ಲ. 89ರಲ್ಲಿ ಲೋಕಸಭೆ ಟಿಕೆಟ್ ವಂಚಿತ ಕೆ.ಲಕ್ಕಪ್ಪ ಅವರಿಗೆ ಕುಣಿಗಲ್ ಟಿಕೆಟ್ ಕೊಟ್ಟು ಮುದ್ದಹನುಮೇಗೌಡರನ್ನು ಕಾಂಗ್ರೆಸ್ ಹಿಂದಕ್ಕೆ ಸರಿಸಿತ್ತು.

ಕೆ.ಲಕ್ಕಪ್ಪ ಅವರ ಅಕಾಲಿಕ ನಿಧನದಿಂದ 1992ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮುದ್ದಹನುಮೇಗೌಡ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರೂ ಪರಾಭವಗೊಂಡಿದ್ದರು. 1994ರಲ್ಲಿ ಗೆದ್ದು 10 ವರ್ಷ ಶಾಸಕರಾಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಆದಾಗ್ಯೂ ಟಿಕೆಟ್‌ಗೆ ಪರದಾಟ ತಪ್ಪಿರಲಿಲ್ಲ.

2013ರಲ್ಲಿ ಕುಣಿಗಲ್ ವಿಧಾನ ಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಜೆಡಿಎಸ್ ಮುದ್ದಹನುಮೇಗೌಡರಿಗೆ ಬಿ.ಫಾರಂ ಕೊಟ್ಟಿತ್ತು. ಕೊನೆ ಗಳಿಗೆಯಲ್ಲಿಡಿ.ನಾಗರಾಜಯ್ಯ ಅವರಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ‘ಸಿ’ ಫಾರಂ ಕೊಟ್ಟು ಮುದ್ದಹನುಮೇಗೌಡರಿಗೆ ರಾಜಕೀಯವಾಗಿ ದೊಡ್ಡ ಹೊಡೆತವನ್ನೇ ಕೊಟ್ಟಿದ್ದರು ಎಂದು ಮುದ್ದಹನುಮೇಗೌಡರ ರಾಜಕೀಯ ಒಡನಾಡಿಗಳು ನೆನಪಿಸಿಕೊಳ್ಳುತ್ತಾರೆ.

2013ರಲ್ಲಿ ಮತ್ತೆ ಕಾಂಗ್ರೆಸ್‌ಗೆ ಬಂದ ಮುದ್ದಹನುಮೇಗೌಡರಿಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ ಅವರು 2014ರ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಟ್ಟರು. ನರೇಂದ್ರ ಮೋದಿ ಅವರ ಅಲೆಯಲ್ಲೂ ಮುದ್ದಹನುಮೇಗೌಡರು ಗೆಲುವಿನ ದಡ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.