ADVERTISEMENT

19 ವರ್ಷದಿಂದ ವಿದ್ಯುತ್ ಕರ ನಿರಾಕರಣೆ!

ತುಮಕೂರಿನಲ್ಲಿ ಚಳವಳಿಗೆ ಮುನ್ನುಡಿ

ಡಿ.ಎಂ.ಕುರ್ಕೆ ಪ್ರಶಾಂತ
Published 28 ಏಪ್ರಿಲ್ 2019, 20:15 IST
Last Updated 28 ಏಪ್ರಿಲ್ 2019, 20:15 IST
   

ತುಮಕೂರು: ‘ಕರ ನಿರಾಕರಣೆ’, 2001ರಿಂದ 2003ರ ನಡುವೆ ರೈತ ಸಂಘವು ರಾಜ್ಯದಾದ್ಯಂತ ರೂಪಿಸಿದ ಬೃಹತ್ ಹೋರಾಟ. ಈ ಚಳವಳಿ ಸರ್ಕಾರಗಳಿಗೆ ‘ರೈತ ಶಕ್ತಿ’ಯನ್ನು ಮನವರಿಕೆ ಮಾಡಿಕೊಟ್ಟಿತ್ತು. ಈಗ ಹಳ್ಳಿಗಳಲ್ಲಿ ರೈತ ಸಂಘದ ಹಸಿರು ಬೋರ್ಡ್‌ಗಳು ಕಡಿಮೆಯಾಗುತ್ತಲೇ ಚಳವಳಿಗಳ ಬಿಸಿಯೂ ತಣಿಯುತ್ತಿದೆ.

ಆದರೆ ಜಿಲ್ಲೆಯ ತಿಪಟೂರು ತಾಲ್ಲೂಕು ಕಿಬ್ಬನಹಳ್ಳಿ ಹೋಬಳಿಯ ತಿಮ್ಮಲಾಪುರ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಲಕ್ಷ್ಮಗೊಂಡನಹಳ್ಳಿಯಲ್ಲಿ ಇಂದಿಗೂ ‘ಕರ ನಿರಾಕರಣೆ’ ಚಳವಳಿ ಜೀವಂತವಿದೆ! ಎರಡೂ ಹಳ್ಳಿಗಳಲ್ಲಿ 19 ವರ್ಷಗಳಿಂದ ‘ವಿದ್ಯುತ್ ಕರ ನಿರಾಕರಣೆ’ ಚಳವಳಿ ನಡೆಯುತ್ತಿದೆ. ಪರಸ್ಪರ ಕೂಗಳತೆಯ ದೂರದಲ್ಲಿರುವ ತಲಾ 70 ಮನೆಗಳ ಈ ಎರಡು ಪುಟ್ಟ ಗ್ರಾಮಗಳು ರೈತ ಚಳವಳಿಯ ಅಧ್ಯಯನಕ್ಕೆ ಉತ್ತಮ ಆಕರಗಳಾಗುತ್ತವೆ.

ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ (2000ನೇ ಇಸವಿ) ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯಲ್ಲಿ ತಾರತಮ್ಯ ಎಸಗಲಾಯಿತು. ಉತ್ಪಾದನೆಯ ಬಹುಪಾಲು ನಗರಕ್ಕೆ ಮತ್ತು ತೀರಾ ಕಡಿಮೆ ಪ್ರಮಾಣದ ವಿದ್ಯುತ್ ಹಳ್ಳಿಗಳಿಗೆ ಮೀಸಲಿಡಲಾಯಿತು.

ADVERTISEMENT

ತಾರತಮ್ಯ ನೀತಿ ವಿರೋಧಿಸಿ ಈ ಎರಡೂ ಗ್ರಾಮಗಳ ಜನರು ‘ವಿದ್ಯುತ್ ಕರ ನಿರಾಕರಣೆ’ ಚಳವಳಿ ಆರಂಭಿಸಿದರು. ತಿಮ್ಮಲಾಪುರ ಮತ್ತು ಲಕ್ಷ್ಮಗೊಂಡನಹಳ್ಳಿಯಲ್ಲಿ ಅದಾಗಲೇ ರೈತ ಸಂಘದ ಶಾಖೆ ಆರಂಭವಾಗಿತ್ತು. ಹೋರಾಟದ ರೂಪುರೇಷೆಯನ್ನು ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ರಾಜ್ಯದಲ್ಲಿ ವಿಸ್ತರಿಸಿದರು.

ಈ ಹೋರಾಟದ ಭಾಗವಾಗಿ 2002ರಲ್ಲಿ ಕೆ.ಬಿ.ಕ್ರಾಸ್‌ನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಂಜುಂಡಸ್ವಾಮಿ ನೇತೃತ್ವದಲ್ಲಿ ರೈತರು ಪ್ರತಿಭಟಿಸಿದ್ದರು. ಪೊಲೀಸರು ರೈತರ ಮೇಲೆ ಲಾಠಿ ಬೀಸಿದರು. ಈ ಹೋರಾಟ ರಾಜ್ಯದಲ್ಲಿ ‘ವಿದ್ಯುತ್ ಕರ ನಿರಾಕರಣೆಯ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿತು. ಹೀಗೆ 2000ದಿಂದ ಈ ಗ್ರಾಮಗಳ ಜನರು ವಿದ್ಯುತ್ ಬಿಲ್ ಪಾವತಿಸಿಲ್ಲ!

‘ಅಂದು ಸರ್ಕಾರ ಹಳ್ಳಿಗಳನ್ನು ಮೂರನೇ ದರ್ಜೆ ರೀತಿ ನೋಡಿತು. ಇದನ್ನು ವಿರೋಧಿಸಿ ಗ್ರಾಮಸ್ಥರು ವಿದ್ಯುತ್ ಬಿಲ್ ಪಾವತಿಸಲಿಲ್ಲ. ಈಗ ನಿರಂತರ ಜ್ಯೋತಿ ವಿದ್ಯುತ್ ಸೌಲಭ್ಯ ಕಲ್ಪಿಸಿದ್ದಾರೆ. ಈ ಸೌಲಭ್ಯ ನೀಡಿದ ದಿನದಿಂದ ಬಿಲ್ ಪಾವತಿಸಲು ಸಿದ್ಧರಿದ್ದೇವೆ’ ಎನ್ನುತ್ತಾರೆ ತಿಪಟೂರು ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ತಿಮ್ಮಲಾಪುರದ ದೇವರಾಜ್.

ಭಾಗ್ಯಜ್ಯೋತಿ; ಮೀಟರ್ ಇಲ್ಲ

ಒಮ್ಮೆ ಡಿವೈಎಸ್‌ಪಿ ಅವರು ‘ನಾವು ಗ್ರಾಮದ ಗಂಡು ಮಕ್ಕಳನ್ನು ನಿಯಂತ್ರಿಸುತ್ತೇವೆ. ಹೆಣ್ಣು ಮಕ್ಕಳ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಬನ್ನಿ ಎಂದು ಬೆಸ್ಕಾಂ ಅಧಿಕಾರಿಗಳನ್ನು ಕಳುಹಿಸಿದ್ದರು. ಹೆಣ್ಣು ಮಕ್ಕಳ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ ಅಧಿಕಾರಿಗಳು ಮರಳಿದರು’ ಎಂದು ನೆನಪಿಸಿಕೊಳ್ಳುತ್ತಾರೆ ದೇವರಾಜ್.

ಗ್ರಾಮಗಳ ಭಾಗ್ಯಜ್ಯೋತಿ ಫಲಾನುಭವಿಗಳ ಮನೆಗಳಿಗೆ ಮೀಟರ್ ಅಳವಡಿಸಲು ರೈತ ಸಂಘ ಅವಕಾಶ ಮಾಡಿಕೊಟ್ಟಿಲ್ಲ. ಈ ಯೋಜನೆಯಡಿ ಸೌಲಭ್ಯ ಪಡೆಯುವವರು ಬಡವರು. ಮೀಟರ್ ಹಾಕುವುದು ಸಹ ಒಂದು ಲಾಬಿ. ಕೆಲವು ಕಂಪನಿ
ಗಳು ವರ್ಷಕ್ಕೆ ಎರಡು ಬಾರಿ ಮೀಟರ್ ಬದಲಿಸುತ್ತವೆ. ಬಡವರು ಈ ಮೀಟರ್‌ಗೆ ಹಣ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.