ADVERTISEMENT

ತುಮಕೂರು: ಆಂಧ್ರ ಗರ್ಭಿಣಿಯರ ಭ್ರೂಣ ಲಿಂಗ ಪತ್ತೆ

ರಾಜ್ಯ ಆರೋಗ್ಯ ಇಲಾಖೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಪತ್ರ

ಡಿ.ಎಂ.ಕುರ್ಕೆ ಪ್ರಶಾಂತ
Published 16 ಜೂನ್ 2019, 19:45 IST
Last Updated 16 ಜೂನ್ 2019, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಜಿಲ್ಲೆಯ ಪಾವಗಡದಲ್ಲಿ ಸದ್ದಿಲ್ಲದೆಯೇ ಭ್ರೂಣ ಲಿಂಗ ಪತ್ತೆ ಕಾರ್ಯ ಹೆಚ್ಚುತ್ತಿವೆ. ಗಡಿ ಭಾಗದ ತಾಲ್ಲೂಕುಗಳಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆಗಳು ಹೆಚ್ಚಿವೆ. ಪಾವಗಡದಲ್ಲಿಯೂ ಇಂತಹ ಪ್ರಕರಣಗಳು ನಡೆಯುತ್ತಿವೆ. ಈ ಬಗ್ಗೆ ಎಚ್ಚರ ವಹಿಸುವಂತೆ ರಾಜ್ಯ ಆರೋಗ್ಯ ಇಲಾಖೆಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಪತ್ರ ಬರೆದಿದೆ.

ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ, ಕಲ್ಯಾಣ ದುರ್ಗ, ಅಮರಾಪುರ ತಾಲ್ಲೂಕುಗಳಿಂದ ಭ್ರೂಣ ಲಿಂಗ ಪತ್ತೆಗೆ ಗರ್ಭಿಣಿಯರು ಹೆಚ್ಚು ಬರುತ್ತಾರೆ ಎನ್ನುತ್ತವೆ ಖಚಿತ ಮೂಲಗಳು. ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಗರ್ಭಿಣಿಯರು ಸಹ ಲಿಂಗಪತ್ತೆಗೆ ಪಾವಗಡಕ್ಕೆ ಬರುವರು.

ಪಟ್ಟಣದ ಮೂರು ಖಾಸಗಿ ಆಸ್ಪತ್ರೆಗಳು ಮತ್ತು ಎರಡು ಖಾಸಗಿ ಕೇಂದ್ರಗಳಲ್ಲಿ ಸ್ಕ್ಯಾನಿಂಗ್‌ ಮಾಡಲಾಗುತ್ತದೆ. ಲಿಂಗ ಪತ್ತೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಎರಡು ವರ್ಷಗಳ ಹಿಂದೆ ಪಟ್ಟಣದ ಆಸ್ಪತ್ರೆಯೊಂದರ ಎದುರು ನಾಗರಿಕರು ಪ್ರತಿಭಟನೆ ಸಹ ನಡೆಸಿದ್ದರು.

ADVERTISEMENT

ಇತ್ತೀಚೆಗೆ ನಡೆದ ಜಿಲ್ಲಾ ಆರೋಗ್ಯ ಇಲಾಖೆಯ ಸಭೆಯಲ್ಲಿ ಈ ವಿಷಯ ಪ್ರಮುಖವಾಗಿ ಪ್ರಸ್ತಾಪವಾಗಿತ್ತು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ‘ಪಾವಗಡದ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸ್ಕ್ಯಾನಿಂಗ್ ಮಾಡಿಸುವ ಪ್ರತಿಯೊಬ್ಬ ಗರ್ಭಿಣಿಯರ ಮಾಹಿತಿ ಪಡೆದು ಪರಿಶೀಲಿಸಬೇಕು. ಅನಂತಪುರ ಜಿಲ್ಲಾಧಿಕಾರಿಗೆ ಈ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ಪತ್ರ ಬರೆಯೋಣ’ ಎಂದಿದ್ದರು.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ದೂರು ದಾಖಲಾಗಿಲ್ಲ. ಮರೆಯಲ್ಲಿಯೇ ನಡೆಯುವ ಈ ಕಾನೂನು ಉಲ್ಲಂಘನೆಯ ಬಗ್ಗೆ ಬಹಿರಂಗವಾಗಿ ಹೇಳಲು ಜನರು ಹಾಗೂ ವೈದ್ಯರು ಹಿಂಜರಿಯುತ್ತಿದ್ದಾರೆ.

‘ಕೆಲವು ವೈದ್ಯರು ಗರ್ಭಿಣಿಯ ಕುಟುಂಬಕ್ಕೆ ಆಪ್ತರಾಗಿದ್ದರೆ ಭ್ರೂಣ ಲಿಂಗದ ಬಗ್ಗೆ ಮಾಹಿತಿ ನೀಡುವರು. ಆದರೆ ಅವರು ಹಣಕ್ಕೆ ಈ ಕೆಲಸ ಮಾಡುವುದಿಲ್ಲ. ಒಂದು ಆಸ್ಪತ್ರೆಯಲ್ಲಿ ಮಾತ್ರ ಅವ್ಯಾಹತವಾಗಿ ಈ ಕೃತ್ಯ ನಡೆಯುತ್ತಿದೆ. ಈ ಕಾರ್ಯಕ್ಕಾಗಿಯೇ ತಾಲ್ಲೂಕಿನಲ್ಲಿ ಮಧ್ಯವರ್ತಿಗಳು ಸಹ ಇದ್ದಾರೆ’ ಎನ್ನುವರು ತಾಲ್ಲೂಕಿನ ವೈದ್ಯರೊಬ್ಬರು. ನನ್ನ ಹೆಸರು ಬರೆಯಬೇಡಿ ಎಂದು ಅವರು ಒತ್ತಿ ಹೇಳಿದರು.

‘ಅನಂತಪುರ ಜಿಲ್ಲೆಯ ಹಿಂದೂಪುರದಲ್ಲಿಯೂ ಇದೇ ರೀತಿ ನಡೆಯುತ್ತಿದೆ. ಲಿಂಗ ಪತ್ತೆಗೆ ₹ 15 ರಿಂದ 20 ಸಾವಿರ ಪಡೆಯಲಾಗುತ್ತಿದೆ. ದಾವಣಗೆರೆಯ ಉಪನ್ಯಾಸಕರೊಬ್ಬರ ಸಹೋದರಿಗೆ ಎರಡು ಹೆಣ್ಣು ಮಕ್ಕಳು ಇದ್ದವು. ಮತ್ತೆ ಆಕೆ ಗರ್ಭಿಣಿ ಆದರು. ಬೇರೆ ಬೇರೆ ಭಾಗದ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಲಿಂಗ ಪತ್ತೆ ಮಾಡಿಸಲು ಮುಂದಾದರು. ಸಾಧ್ಯವಾಗಲಿಲ್ಲ. ಇಲ್ಲಿಗೆ ಬಂದಾಗ ಗಂಡು ಎನ್ನುವುದು ಗೊತ್ತಾಯಿತು’ ಎಂದು ಪ್ರಕರಣಗಳ ಮಾಹಿತಿ ನೀಡುವರು.

ದೂಳು ಹಿಡಿದ ಸ್ಕ್ಯಾನಿಂಗ್ ಯಂತ್ರ: ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ಸ್ಕ್ಯಾನಿಂಗ್ ಯಂತ್ರಗಳಿವೆ. ಆದರೆ, ರೇಡಿಯಾಲಜಿಸ್ಟ್ ಹುದ್ದೆಯೇ ಇಲ್ಲಿಗೆ ಮಂಜೂರಾಗಿಲ್ಲ. ಯಂತ್ರಗಳು ದೂಳು ಹಿಡಿಯುತ್ತಿವೆ. ಇಲ್ಲಿ ಸ್ಕ್ಯಾನಿಂಗ್ ಸೌಲಭ್ಯ ಇದ್ದಿದ್ದರೆ ಪರೋಕ್ಷವಾಗಿ ಭ್ರೂಣ ಲಿಂಗ ಪತ್ತೆಯನ್ನು ತಡೆಯಲು ಸಾಧ್ಯವಿತ್ತು ಎನ್ನುವರು ಮತ್ತೊಬ್ಬ ವೈದ್ಯರು.

ಕಠಿಣ ಕ್ರಮದ ಎಚ್ಚರಿಕೆ

‘ಪಾವಗಡದಲ್ಲಿ ಭ್ರೂಣ ಲಿಂಗ ಪತ್ತೆ ಹೆಣ್ಣು ಭ್ರೂಣ ಹತ್ಯೆಯ ಕುರಿತು ರಾಜ್ಯ ಆರೋಗ್ಯ ಇಲಾಖೆ ನಮಗೆ ಪತ್ರ ಬರೆದಿದೆ. ಈಗಾಗಲೇ ಜಿಲ್ಲೆಯ ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳ ಆವರಣದಲ್ಲಿ ಕಡ್ಡಾಯವಾಗಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಸೂಚಿಸಿದ್ದೇವೆ. ಉಲ್ಲಂಘನೆಗಳು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಿಕಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.