ADVERTISEMENT

ತುಂಗಭದ್ರಾ ಜಲಾಶಯಕ್ಕೆ ನಾಳೆ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 13:17 IST
Last Updated 21 ಸೆಪ್ಟೆಂಬರ್ 2024, 13:17 IST
<div class="paragraphs"><p>ತುಂಗಭದ್ರಾ ಜಲಾಶಯ</p></div>

ತುಂಗಭದ್ರಾ ಜಲಾಶಯ

   

ಕೊಪ್ಪಳ: ರಾಜ್ಯದ ನಾಲ್ಕು ಜಿಲ್ಲೆಗಳು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರಾ ಆಣೆಕಟ್ಟು ಮತ್ತೆ ಭರ್ತಿಯಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭಾನುವಾರ ಬೆಳಿಗ್ಗೆ 11.15ಕ್ಕೆ ಬಾಗಿನ ಅರ್ಪಿಸಲಿದ್ದಾರೆ.

ಇದಕ್ಕಾಗಿ ಕೊಪ್ಪಳ ಹಾಗೂ ವಿಜಯನಗರ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಜೊತೆಗೆ ಹಲವು ದಿನಗಳ ಹಿಂದೆ 19ನೇ ಕ್ರಸ್ಟ್‌ಗೇಟ್‌ ಕೊಚ್ಚಿ ಹೋಗಿದ್ದರಿಂದ ದೊಡ್ಡ ಪ್ರಮಾಣದಲ್ಲಿ ನೀರು ಪೋಲಾಗುವುದನ್ನು ಕನ್ನಯ್ಯ ನಾಯ್ಡು ಹಾಗೂ ಅವರ ತಂಡ ತಡೆದಿತ್ತು. ಅವರಿಗೂ ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ನ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಗುತ್ತದೆ. ಈ ಜಲಾಶಯ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಜನರಿಗೆ ಅನುಕೂಲವಾಗಿದೆ.

ADVERTISEMENT

‘ಕಳೆದ ತಿಂಗಳು ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯಬೇಕಿತ್ತು. ಆಗ ಕ್ರಸ್ಟ್‌ಗೇಟ್‌ ಕೊಚ್ಚಿಹೋಗಿದ್ದರಿಂದ ಆಗಿರಲಿಲ್ಲ. ಉತ್ತಮ ಮಳೆಯಾಗಿ ಮತ್ತೆ ಜಲಾಶಯ ತುಂಬಿದ್ದರಿಂದ ಈಗ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಬಾಗಿನ ಅರ್ಪಿಸಲಿದ್ದಾರೆ’ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ನಲಿನ್‌ ಅತುಲ್‌, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆಯ, ಎಸ್‌.ಪಿ. ಡಾ. ರಾಮ್‌ ಎಲ್‌. ಅರಸಿದ್ಧಿ ಸೇರಿದಂತೆ ಅನೇಕರು ಶನಿವಾರ ಆಣೆಕಟ್ಟು ಮೇಲಿನ ತಯಾರಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.