ADVERTISEMENT

ತುಂಗಭದ್ರಾ: 3 ಕ್ರಸ್ಟ್‌ಗೇಟ್ ಮೂಲಕ ನದಿಗೆ ನೀರು; ಸುರಕ್ಷಿತವಾಗಿರಲು ಮಂಡಳಿ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 13:15 IST
Last Updated 22 ಜುಲೈ 2024, 13:15 IST
<div class="paragraphs"><p>ತುಂಗಭದ್ರಾ ಜಲಾಶಯದ ಮೂರು ಕ್ರಸ್ಟ್ ಗೇಟ್‌ಗಳನ್ನು ಸೋಮವಾರ ತೆರೆದ ಸಂದರ್ಭದಲ್ಲಿ ಕಂಡುಬಂದ ದೃಶ್ಯ</p></div>

ತುಂಗಭದ್ರಾ ಜಲಾಶಯದ ಮೂರು ಕ್ರಸ್ಟ್ ಗೇಟ್‌ಗಳನ್ನು ಸೋಮವಾರ ತೆರೆದ ಸಂದರ್ಭದಲ್ಲಿ ಕಂಡುಬಂದ ದೃಶ್ಯ

   

ಪ್ರಜಾವಾಣಿ ಚಿತ್ರ

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆ ಭರ್ತಿಯಾಗಲು ಐದು ಅಡಿಗಳಷ್ಟೇ ಬೇಕಿದ್ದು, ಸೋಮವಾರ ಸಂಜೆ 5 ಗಂಟೆಗೆ ಮೂರು ಕ್ರಸ್ಟ್‌ಗೇಟ್‌ಗಳನ್ನು ಒಂದು ಅಡಿಯಷ್ಟು ಎತ್ತರಕ್ಕೆ ತೆರೆದು 3,987 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ.

ADVERTISEMENT

ಜತೆಗೆ ಅಣೆಕಟ್ಟೆಯ ಬಲಬದಿಯ ತೂಬಿನ ಮೂಲಕ 1,257 ಕ್ಯುಸೆಕ್‌ ಹಾಗೂ ಎಡಬದಿಯ ತೂಬಿನ ಮೂಲಕ 2,500 ಕ್ಯುಸೆಕ್‌ ನೀರು ನದಿ ಸೇರುತ್ತಿದೆ. ಈ ಮೂಲಕ 7,744 ಕ್ಯುಸೆಕ್‌ ನೀರು ನದಿಯನ್ನು ಸೇರುತ್ತಿದೆ.

1,633 ಅಡಿ ಎತ್ತರದ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 1,628.09 ಅಡಿ ತಲುಪಿದೆ. 105.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 87.06 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಸದ್ಯ 1.01 ಲಕ್ಷ ಕ್ಯೂಸೆಕ್‌ ಒಳಹರಿವಿದ್ದು, ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಒಳಹರಿವಿನ ಪ್ರಮಾಣ ಜಾಸ್ತಿಯಾಗುವ ನಿರೀಕ್ಷೆ ಇದೆ, ಹೀಗಾಗಿ 50 ಸಾವಿರ ಕ್ಯುಸೆಕ್‌ತನಕ ನದಿಗೆ ನೀರು ಹರಿಸುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಮಂಡಳಿ ಪ್ರಕಟಣೆಯುಲ್ಲಿ ತಿಳಿಸಿದೆ.

ಎಚ್‌ಎಲ್‌ಸಿ ಕಾಲುವೆಗೆ ನೀರು: ಸೋಮವಾರ ಬೆಳಿಗ್ಗೆ 9.30ಕ್ಕೆ ತುಂಗಭದ್ರಾ ಮಂಡಳಿಯ ಮುಖ್ಯ ಕಾರ್ಯದರ್ಶಿ ಓ.ಆರ್.ಕೆ.ರೆಡ್ಡಿ ಅವರು ಪೂಜೆ ಸಲ್ಲಿಸುವ ಮೂಲಕ ಬಲದಂಡೆ ಮೇಲ್ಮಟ್ಟದ ಕಾಲುವೆಗೆ (ಎಚ್‌ಎಲ್‌ಸಿ) ನೀರು ಹರಿಸಲಾಯಿತು.  ಮಂಡಳಿಯ ಅಧೀಕ್ಷಕ ಎಂಜಿನಿಯರ್‌ ಶ್ರೀಕಾಂತ್‍ ರೆಡ್ಡಿ, ಕಾರ್ಯನಿರ್ವಾಹಕ ಎಂಜಿನಿಯರ್‌  ರವಿಚಂದ್ರ, ಉಪವಿಭಾಗೀಯ ಅಧಿಕಾರಿಗಳಾದ ಗೋಪಿ, ಗಣೇಶ್, ಕೃಷ್ಣಮೂರ್ತಿ, ಸೆಕ್ಷನ್ ಅಧಿಕಾರಿ ರಾಘವೇಂದ್ರ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ತುಂಗಭದ್ರಾ ರೈತ ಸಂಘದ ಅಧ್ಯಕ್ಷ  ಜಿ.ಪುರುಶೋತ್ತಮ ಗೌಡ ಇತರರು ಪಾಲ್ಗೊಂಡಿದ್ದರು.

ಇದೇ 19ರಿಂದ ಎಡದಂಡೆ ಕಾಲುವೆ ಹಾಗೂ ಬಲದಂಡೆಯ ಕೆಳಮಟ್ಟದ (ಎಲ್‌ಎಲ್‌ಸಿ) ಕಾಲುವೆಗೆ ನೀರು ಬಿಡಲು ಆರಂಭಿಸಲಾಗಿತ್ತು. 

24ರಿಂದ ಎಲ್ಲ ಗೇಟ್ ಮೂಲಕ ನೀರು

ಇನ್ನು ಎರಡರಿಂದ ಮೂರು ದಿನಗಳಲ್ಲೇ ಜಲಾಶಯ ಭರ್ತಿಯಾಗುವ ಸಾಧ್ಯತೆ ಇರುವ ಕಾರಣ ಜುಲೈ 24ರಂದು ಅಣೆಕಟ್ಟೆಯ ಎಲ್ಲಾ 33 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುವುದು ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.

ಪ್ರವಾಹ ಸ್ಥಿತಿ ನಿರ್ಮಾಣವಾಗಬಹುದು, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.