ADVERTISEMENT

ಕೈಗಾರಿಕೆ: ಎರಡು ಎಕರೆವರೆಗಿನ ಕೃಷಿ ಭೂಮಿಗೆ ಭೂ ಪರಿವರ್ತನೆಯಿಂದ ವಿನಾಯಿತಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 20:41 IST
Last Updated 10 ಸೆಪ್ಟೆಂಬರ್ 2025, 20:41 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಕೃಷಿ ಭೂಮಿ ಖರೀದಿ ಸರಳೀಕರಣ ಮತ್ತು ಕೆಲವು ಉದ್ದೇಶಗಳಿಗೆ ಭೂಮಿ ಪರಿವರ್ತನೆ ನಿಯಮ ಸಡಿಲಿಕೆಗೆ ಅವಕಾಶ ಕಲ್ಪಿಸುವ ‘ಕರ್ನಾಟಕ ಭೂ ಸುಧಾರಣೆಗಳು ಮತ್ತು ಇತರೆ ಕಾನೂನು (ತಿದ್ದುಪಡಿ)’ ಮಸೂದೆ ಸೇರಿ ವಿವಿಧ ಮಸೂದೆಗಳಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರು ಅಂಕಿತ ಹಾಕಿದ್ದಾರೆ. ಆ ಬೆನ್ನಲ್ಲೆ, ರಾಜ್ಯ ಸರ್ಕಾರ ಗೆಜೆಟ್‌ ಹೊರಡಿಸಿದೆ. 

ಶಿಕ್ಷಣ ಸಂಸ್ಥೆಗಳಿಗೆ ಅಥವಾ ಕೈಗಾರಿಕೆಗಳಿಗೆ ಎರಡು ಎಕರೆವರೆಗಿನ ಕೃಷಿ ಭೂಮಿಗೆ ಭೂ ಪರಿವರ್ತನೆಯಿಂದ ವಿನಾಯಿತಿ ನೀಡುವ, ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕೆಗಳಿಗೆ ನಾಲ್ಕು ಹೆಕ್ಟೇರ್‌ವರೆಗೆ ಕೃಷಿ ಭೂಮಿ ಖರೀದಿಗೆ ಮಿತಿ, ಜಿಲ್ಲಾಧಿಕಾರಿಗಳಿಗೆ ಭೂಮಿ ಖರೀದಿಸುವ ಅಧಿಕಾರ, ಕೃಷಿ ಭೂಮಿಯನ್ನು ಅನುಮತಿ ಇಲ್ಲದೆ ಅಥವಾ ಪರಿವರ್ತನೆ ಮಾಡದೆ ಕೃಷಿಯೇತರ ಉದ್ದೇಶಕ್ಕೆ ಬಳಸಿದರೆ ₹ 1 ಲಕ್ಷ ದಂಡ, ನವೀಕರಿಸಬಹುದಾದ ಇಂಧನ ಉತ್ಪಾದನೆಗಾಗಿ ಕೃಷಿ ಭೂಮಿಯ ಸ್ವಯಂ ಚಾಲಿತ ಪರಿವರ್ತನೆ ಪ್ರಮಾಣಪತ್ರ ನೀಡಲು ಕೂಡಾ ಕರ್ನಾಟಕ ಭೂ ಸುಧಾರಣೆ, ಇತರೆ ಕಾನೂನು ಮಸೂದೆ ಅವಕಾಶ ನೀಡಿದೆ.

ADVERTISEMENT

ಇತರ ಮಸೂದೆಗಳು:

ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಕೂಡಲ ಸಂಗಮ ಅಭಿವೃದ್ಧಿ ಮಂಡಳಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ, ಬನವಾಸಿ ಅಭಿವೃದ್ಧಿ ಪ್ರಾಧಿಕಾರಗಳಿಗೆ ಮುಖ್ಯಮಂತ್ರಿ ಅಥವಾ ಕಂದಾಯ ಮಂತ್ರಿ ಅಥವಾ ಮುಖ್ಯಮಂತ್ರಿ ಆಯ್ಕೆ ಮಾಡಿದ ಯಾರಾದರು ಸಚಿವರು ಪದನಿಮಿತ್ತ ಅಧ್ಯಕ್ಷರಾಗಿ ಮಾಡಲು ಅವಕಾಶ ಕಲ್ಪಿಸುವ ತಿದ್ದುಪಡಿ ಮಸೂದೆಗಳಿಗೂ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ಲಿಫ್ಟ್‌, ಎಸ್ಕಲೇಟರ್‌ ಅಥವಾ ಪ್ಯಾಸೆಂಜರ್‌ ಕನ್ವೇಯರ್‌ಗಳನ್ನು ಭಾರತೀಯ ಗುಣಮಟ್ಟ ಬ್ಯೂರೊ ಪದ್ಧತಿ
ಗಳ ಅಸ್ತಿತ್ವದಲ್ಲಿರುವ ಸಂಬಂಧಪಟ್ಟ ಸಂಹಿತೆ ಮತ್ತು ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರ (ಸುರಕ್ಷತೆ ಮತ್ತು ವಿದ್ಯುತ್‌ ಸರಬರಾಜಿಗೆ ಸಂಬಂಧಿಸಿದ ಕ್ರಮಗಳು) ವಿನಿಮಯಗಳ ಅನ್ವಯ ಸ್ಥಾಪಿಸಲು ನಿರ್ದೇಶಿಸುವ ಉದ್ದೇಶದ ‘ಕರ್ನಾಟಕ ಲಿಫ್ಟ್‌ಗಳ, ಎಸ್ಕಲೇಟರ್‌ಗಳ ಮತ್ತು ಪ್ಯಾಸೆಂಜರ್ ಕನ್ವೇಯರ್‌ಗಳ (ತಿದ್ದುಪಡಿ) ಮಸೂದೆ, ಪ್ರವಾಸೋದ್ಯಮ ಉತ್ತೇಜನಕ್ಕೆ ಜಿಲ್ಲಾ ಮಟ್ಟದ ಮೇಲುಸ್ತುವಾರಿ ಸಮಿತಿ ರಚಿಸಲು ಅವಕಾಶ ಕಲ್ಪಿಸಲು ರೂಪಿಸಿದ ‘ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ(ಸೌಲಭ್ಯ,ನಿಯಂತ್ರಣ) (ತಿದ್ದುಪಡಿ) ಮಸೂದೆ, ಎಸ್ಮಾ ವಿಧಿಸುವ ಅವಕಾಶ ವನ್ನು ಮುಂದಿನ 20 ವರ್ಷಗಳ ಅವಧಿ ವಿಸ್ತರಿಸಲು ಅವಕಾಶ ನೀಡುವ ‘ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ (ತಿದ್ದುಪಡಿ) ಮಸೂದೆ, ರಾಜ್ಯದ ಬಹುಮಹಡಿ ಕಟ್ಟಡಗಳಿಗೆ ಶೇ 1ರಷ್ಟು ಅಗ್ನಿ ಸೆಸ್‌ ವಿಧಿಸಲು ಅವಕಾಶ ಮಾಡಿಕೊಡುವ ‘ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ಮಸೂದೆ’ಗೂ ಅಂಕಿತ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.