ADVERTISEMENT

ಪಾಕ್‌ ಪರ ಘೋಷಣೆ: ಇಬ್ಬರ ಬಂಧನ

ಸಾರ್ವಜನಿಕರಿಂದ ಥಳಿತ; ಇಬ್ಬರು ಪರಾರಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2019, 19:27 IST
Last Updated 3 ಮಾರ್ಚ್ 2019, 19:27 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಬೆಳಗಾವಿ: ಇಲ್ಲಿನ ಕಾಮತ್‌ ಗಲ್ಲಿಯಲ್ಲಿ ಭಾನುವಾರ ಪಾಕಿಸ್ತಾನ ಪರ ಘೋಷಣೆ ಕೂಗಿ ಪಟಾಕಿ ಸಿಡಿಸಿದ ಆರೋಪದ ಮೇಲೆ ಇಬ್ಬರು ಯುವಕರನ್ನು ಸಾರ್ವಜನಿಕರು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.

ವೀರಭದ್ರನಗರ ಅಸದ್‌ಖಾನ್ ಸೊಸೈಟಿ ನಿವಾಸಿ ಸೈಫ್ ಅಯೂಬ್ ಪಟೇಲ್ (22), ಕಲೈಗಾರ ಗಲ್ಲಿಯ ಅಯೂಬ್ ಬಸೀರ್ ಮುಲ್ಲಾ (19) ಬಂಧಿತರು. ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ.

‘ಮಧ್ಯಾಹ್ನ 3.30ರ ಸುಮಾರಿಗೆ ನಾಲ್ವರು ಯುವಕರು ಪಟಾಕಿ ಸಿಡಿಸಿದ್ದಾರೆ. ನಂತರ ಎಲ್ಲರೂ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಬೆನ್ನತ್ತಿ ಇಬ್ಬರನ್ನು ಹಿಡಿದು, ಕೈಗೆ ಹಗ್ಗ ಕಟ್ಟಿ ಥಳಿಸಿದ್ದಾರೆ. ಈ ವೇಳೆ, ಶಾಹಬಾಜ್‌ ಹಾಗೂ ಶಾಹಿಲ್‌ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿಗಳಾದ ಎನ್.ವಿ. ಬರಮನಿ, ಮಹಾಂತೇಶ್ವರ ಜಿದ್ದಿ, ಮಾರ್ಕೆಟ್ ಠಾಣೆ ಇನ್‌ಸ್ಪೆಕ್ಟರ್‌ ವಿಜಯ ಮುರಗುಂಡಿ ಸ್ಥಳೀಯರಿಂದ ಮಾಹಿತಿ ಪಡೆದರು.

ಮಾರ್ಕೆಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯಿಂದಾಗಿ, ಕಾಮತ್ ಗಲ್ಲಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.