ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಒಂದೇ ದಿನ ಎರಡು ಪತ್ರಿಕೆಗಳ ಪರೀಕ್ಷೆ ನಿಗದಿ ಮಾಡಲಾಗಿದೆ.
‘ಬಿ.ಎ ಅಂತಿಮ ವರ್ಷದವರಿಗೆ ಅ. 2ರಂದು ಬೆಳಿಗ್ಗೆ 9ರಿಂದ 12ರವರೆಗೆ ಇತಿಹಾಸ ಮತ್ತು ಮಧ್ಯಾಹ್ನ 2ರಿಂದ 5ರವರೆಗೆ ಸಮಾಜಶಾಸ್ತ್ರ ಪರೀಕ್ಷೆ ಇಡಲಾಗಿದೆ. ಒಂದೇ ದಿನ ಆರು ತಾಸು ಪರೀಕ್ಷೆ ಬರೆಯುವುದು ಕಷ್ಟವಾಗುತ್ತದೆ’ ಎಂದು ಅಭ್ಯರ್ಥಿಯೊಬ್ಬರು ಅಳಲು ತೋಡಿಕೊಂಡರು.
ಸೆ.25 ಮತ್ತು 28ರಂದು ಈ ಪತ್ರಿಕೆಗಳ ಪರೀಕ್ಷೆ ನಿಗದಿಯಾಗಿತ್ತು. 25ರಂದು ಪ್ರತಿಭಟನೆ ಮತ್ತು 28ರಂದು ಕರ್ನಾಟಕ ಬಂದ್ ಇದ್ದುದರಿಂದ ಈ ಪರೀಕ್ಷೆ ಮುಂದೂಡಲಾಗಿತ್ತು.
‘ದೂರಶಿಕ್ಷಣದ ಮೂಲಕ ಪರೀಕ್ಷೆ ಬರೆಯುವ ಬಹುತೇಕರು ಬೇರೆ ಬೇರೆ ಉದ್ಯೋಗದಲ್ಲಿರುತ್ತಾರೆ. ಎಲ್ಲರಿಗೂ ಅನುಕೂಲವಾಗುವಂತೆ ವೇಳಾಪಟ್ಟಿ ತಯಾರಿಸುವುದು ಸವಾಲಿನ ಕೆಲಸ. ಮೊದಲಿಗೆ ಎಲ್ಲ ಪರಿಶೀಲಿಸಿ ವೇಳಾ
ಪಟ್ಟಿ ನಿಗದಿ ಮಾಡಲಾಗಿತ್ತು. ಬಂದ್ ಇದ್ದುದರಿಂದ ಪರೀಕ್ಷೆ ಮುಂದೂಡಬೇಕಾಯಿತು’ ಎಂದು ಕೆಎಸ್‌ಒಯು ಕುಲಪತಿ ಡಾ.ಎಸ್. ವಿದ್ಯಾಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವರು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆ ಮುಂದೂಡಿರುವುದರಿಂದ ಅವರಿಗೂ ತೊಂದರೆಯಾಗಿದೆ. ಅ.7ಕ್ಕೆ ಅವರು ಕರ್ತವ್ಯಕ್ಕೆ ತೆರಳಬೇಕು. ಆದಷ್ಟು ಬೇಗ ಪರೀಕ್ಷೆ ಪೂರ್ಣಗೊಳಿಸಿ ಎಂದು ಮನವಿ ಮಾಡಿದ್ದರು. ಅವರಲ್ಲದೆ, ಹಲವು ಅಭ್ಯರ್ಥಿಗಳು ಪರೀಕ್ಷೆಗಳನ್ನು ಬೇಗ ಪೂರ್ಣಗೊಳಿಸಿ ಎಂದು ಕೋರಿದ್ದಾರೆ’ ಎಂದು ಹೇಳಿದರು.
‘ಕೋವಿಡ್ ಇರುವುದರಿಂದ ಹಲವರಿಗೆ ಎರಡನೇ ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಅದೇ ಮಾನ
ದಂಡ ಆಧರಿಸಿ, ಅ.2ರಂದು ಎರಡು ಪತ್ರಿಕೆಗಳನ್ನು ಬರೆಯಲಾಗದವರಿಗೆ ಮತ್ತೊಂದು ಅವಕಾಶ ನೀಡಲಾಗುತ್ತದೆ. ಒಂದು ಪತ್ರಿಕೆಗೆ ಅವರು ಗೈರು ಹಾಜರಾದರೂ, ಮತ್ತೊಂದು ದಿನ ಪರೀಕ್ಷೆಗೆ ಅವಕಾಶ ನೀಡಲಾಗುವುದು’ ಎಂದರು.
‘ಅ.2ರಂದು ಬೇರೆ ಪರೀಕ್ಷೆ ಇದ್ದುದರ ಬಗ್ಗೆ ಅಥವಾ ಎರಡು ಪತ್ರಿಕೆ ಇದ್ದುದರ ಬಗ್ಗೆ ಪ್ರವೇಶ ಪತ್ರ ತೋರಿಸಿದರೆ ಅವರಿಗೆ ಮತ್ತೊಂದು ಅವಕಾಶ ನೀಡಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.