ADVERTISEMENT

ಒಂದೇ ದಿನ ಎರಡು ಪರೀಕ್ಷೆ ಗೊಂದಲದಲ್ಲಿ ಅಭ್ಯರ್ಥಿಗಳು

ಅ. 4ರಂದು ಯುಪಿಎಸ್‌ಸಿ ಪೂರ್ವಭಾವಿ, ಟಿಇಟಿ ಪರೀಕ್ಷೆ

ಇ.ಎಸ್.ಸುಧೀಂದ್ರ ಪ್ರಸಾದ್
Published 29 ಸೆಪ್ಟೆಂಬರ್ 2020, 21:22 IST
Last Updated 29 ಸೆಪ್ಟೆಂಬರ್ 2020, 21:22 IST
   

ಧಾರವಾಡ: ಈಗಾಗಲೇ ಎರಡು ಬಾರಿ ದಿನಾಂಕ ಬದಲಾವಣೆಯಾಗಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಗೆ ಅ.4 ರಂದು ದಿನಾಂಕ ನಿಗದಿಯಾಗಿದೆ. ಆದರೆ ಇದೇ ದಿನ ಕೇಂದ್ರ ಲೋಕಸೇವಾ ಆಯೋಗದ ಪ್ರಿಲಿಮ್ಸ್ ಪರೀಕ್ಷೆಯೂ ನಿಗದಿಯಾಗಿರುವುದರಿಂದ ಅಭ್ಯರ್ಥಿಗಳು ಗೊಂದಲಕ್ಕೊಳಗಾಗಿದ್ದಾರೆ.

ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯು ಏಪ್ರಿಲ್‌ 12ರಂದು ಟಿಇಟಿ ಪರೀಕ್ಷೆ ನಡೆಸಲು ನಿರ್ಧರಿಸಿತ್ತು. ಆದರೆ ಅದೇ ದಿನ ರಾಜ್ಯದ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆಸೆಟ್) ನಿಗದಿಯಾಗಿದ್ದರಿಂದ, ದಿನಾಂಕ ಬದಲಿಸಿ ಏ. 11ರಂದು ಟಿಇಟಿ ಪರೀಕ್ಷೆ ನಡೆಸಲು ನಿರ್ಧರಿಸಲಾಯಿತು. ಆದರೆ ಕೋವಿಡ್ ನಿಯಂತ್ರಿಸಲು ಜಾರಿಗೆ ಬಂದ ಲಾಕ್‌ಡೌನ್‌ನಿಂದಾಗಿ ಪರೀಕ್ಷೆಯನ್ನು ಅನಿರ್ದಿಷ್ಟಾವಧಿ ಮುಂದೂಡಲು ಇಲಾಖೆ ನಿರ್ಣಯ ತೆಗೆದುಕೊಂಡಿತು.

ನಂತರ ಜೂನ್ 5ರಂದು ಪರೀಕ್ಷೆ ನಡೆಸುವ ಕುರಿತು ಶಿಕ್ಷಣ ಸಚಿವರು ಹೇಳಿದ್ದರು. ಕಾರಣಾಂತರಗಳಿಂದ ಆಗಲೂ ಪರೀಕ್ಷೆ ನಡೆಯಲಿಲ್ಲ. ಇದೀಗ ಅ. 4ರಂದು ನಿಗದಿಯಾಗಿದೆ. ಬೆಳಿಗ್ಗೆ ಡಿ.ಇಡಿ. ಹಾಗೂ ಮಧ್ಯಾಹ್ನ ಬಿ.ಇಡಿ. ಪದವೀಧರರಿಗೆ ಪರೀಕ್ಷೆ ನಡೆಯಲಿದೆ. ಇದಕ್ಕೆ ಪ್ರವೇಶ ಪತ್ರಗಳನ್ನು ಸೆ. 25ರಂದು ಅಂತರ್ಜಾಲದಲ್ಲಿ ಪ್ರಕಟಿಸಿದೆ.

ADVERTISEMENT

‘ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಯು ಮೂರು ತಿಂಗಳ ಮೊದಲೇ ನಿರ್ಧಾರವಾಗಿದೆ. ಆದರೆ ಟಿಇಟಿ ಪರೀಕ್ಷೆಯನ್ನು ಯುಪಿಎಸ್‌ಸಿ ಪರೀಕ್ಷೆ ದಿನಾಂಕ ಗಮನಿಸದೆ ನಿಗದಿಪಡಿಸಿದಂತಿದೆ. ಆದರೆ ಈಗ ಎರಡೂ ಪರೀಕ್ಷೆಗಳು ಒಂದೇ ದಿನ ನಿಗದಿಯಾಗಿದ್ದರಿಂದ ಹಲವು ತಿಂಗಳ ಪರಿಶ್ರಮ ವ್ಯರ್ಥವಾಗಲಿದೆ. ಶಿಕ್ಷಣ ಇಲಾಖೆಯು ಇನ್ನೊಂದು ಸಲ ಪರೀಕ್ಷೆ ದಿನಾಂಕವನ್ನು ಮುಂದೂಡಿದರೆ ಬಹಳಷ್ಟು ಅಭ್ಯರ್ಥಿಗಳಿಗೆ ನೆರವಾಗಲಿದೆ’ ಎಂದು ಅಭ್ಯರ್ಥಿಯೊಬ್ಬರು ಹೇಳಿದರು.

ಈ ನಡುವೆ ನಾಗರಿಕ ಸೇವಾ ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಯುಪಿಎಸ್‌ಸಿ ಸುಪ್ರೀಂ ಕೋರ್ಟ್‌ಗೆ ನೀಡಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಕೆಲ ಅಭ್ಯರ್ಥಿಗಳು ಪರೀಕ್ಷೆಯನ್ನು ಕನಿಷ್ಠ ಮೂರು ತಿಂಗಳು ಮುಂದೂಡುವಂತೆ ಕೋರಿದ್ದರು. ಇದರ ವಿಚಾರಣೆ ಬುಧವಾರ ನಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.