ADVERTISEMENT

ವಿಮ್ಸ್‌ ಅವಘಡ; ಸಾವಿನ ಹೊಣೆ ಸರ್ಕಾರವೇ ಹೊರಲಿ, ಕಾಂಗ್ರೆಸ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 18:36 IST
Last Updated 15 ಸೆಪ್ಟೆಂಬರ್ 2022, 18:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ವಿಮ್ಸ್‌) ಚಿಕಿತ್ಸೆಗೆ ದಾಖಲಾಗಿದ್ದ ಮೂವರು ರೋಗಿಗಳು ವಿದ್ಯುತ್‌ ಪೂರೈಕೆಯಲ್ಲಿನ ವ್ಯತ್ಯಯದಿಂದ ವೆಂಟಿಲೇಟರ್‌ ಸ್ಥಗಿತಗೊಂಡು ಮೃತ ಪಟ್ಟಿರುವ ಪ್ರಕರಣ ವಿಧಾನಸಭೆಯಲ್ಲಿ ಗುರುವಾರ ಪ್ರತಿಧ್ವನಿಸಿತು. ರೋಗಿಗಳ ಸಾವಿನ ಹೊಣೆಯನ್ನು ಸರ್ಕಾರವೇ ಹೊತ್ತುಕೊಳ್ಳಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿತು.

ವಿಧಾನಸಭೆಯಲ್ಲಿ ಗುರುವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ವಿಮ್ಸ್‌ನಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದ್ದ ಅವಧಿಯಲ್ಲಿ ಜನರೇಟರ್‌ ಕೂಡ ಕಾರ್ಯನಿರ್ವಹಿಸಿಲ್ಲ. ಈ ಅವಧಿಯಲ್ಲಿ ಮೌಲಾ ಹುಸೇನ್‌ (35), ಚಿಟ್ಟೆಮ್ಮ (30) ಮತ್ತು ಚಂದ್ರಮ್ಮ (60) ಎಂಬುವವರು ಮೃತಪಟ್ಟಿದ್ದಾರೆ ಎಂಬ ವರದಿ ಮಾಧ್ಯಮ ಗಳಲ್ಲಿ ಪ್ರಕಟವಾಗಿದೆ. ಸರ್ಕಾರದ ನಿರ್ಲಕ್ಷ್ಯವೇ ಈ ಸಾವುಗಳಿಗೆ ಕಾರಣ’ ಎಂದರು.

‘ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಆಗಿದ್ದರೂ ವಿಮ್ಸ್‌ ನಿರ್ದೇಶಕರು ದೂರವಾಣಿ ಕರೆಗಳನ್ನು ಸ್ವೀಕರಿಸಿರಲಿಲ್ಲ ಎಂಬ ಆರೋಪವಿದೆ. ಜಿಲ್ಲಾಧಿಕಾರಿ, ಕಾಲೇಜಿನ ನಿರ್ದೇಶಕರು, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆರೋಗ್ಯ ಸಚಿವರು ಈ ದುರ್ಘಟನೆಯ ಹೊಣೆ ಹೊತ್ತುಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು. ಮೃತರ ಕುಟುಂಬಗಳಿಗೆ ತಲಾ ₹ 25 ಲಕ್ಷ ಪರಿಹಾರ ನೀಡಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

‘ವಿದ್ಯುತ್‌ ಪೂರೈಕೆ ಸ್ಥಗಿತವಾಗಿರಲಿಲ್ಲ’: ಉತ್ತರ ನೀಡಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ‘ಆ ಅವಧಿಯಲ್ಲಿ ಎರಡು ಸಾವುಗಳು ಮಾತ್ರ ಸಂಭವಿಸಿವೆ. ಮೂತ್ರಪಿಂಡಗಳ ವೈಫಲ್ಯದಿಂದ ಅಸ್ವಸ್ಥರಾಗಿದ್ದ ಮೌಲಾ ಹುಸೇನ್‌ ಭಾನುವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಮೃತಪಟ್ಟಿದ್ದಾರೆ. ಚಿಟ್ಟೆಮ್ಮ ಹಾವು ಕಡಿತದಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಇಬ್ಬರ ಸಾವಿಗೂ ವಿದ್ಯುತ್‌ ಪೂರೈಕೆಯಲ್ಲಿನ ವ್ಯತ್ಯಯ ಕಾರಣವಲ್ಲ’
ಎಂದರು.

‘ವಿಮ್ಸ್‌ನಲ್ಲಿ ವಿದ್ಯುತ್‌ ಕೊರತೆ ಆಗಿಯೇ ಇಲ್ಲ. ವಿದ್ಯುತ್‌ ಪೂರೈಕೆ ಸ್ಥಗಿತವಾದ ಬಳಿಕ ಯುಪಿಎಸ್‌ ಬಳಕೆಯಾಗಿದೆ. ನಂತರ ಜನರೇಟರ್‌ ಬಳಕೆಯಾಗಿದೆ. ನಾನು ವಿಮ್ಸ್‌ ನಿರ್ದೇಶಕರ ಜತೆ ಮಾತನಾಡಿದ್ದೇನೆ. ಯಾವುದೇ ಲೋಪವೂ ಆಗಿಲ್ಲ’ ಎಂದು ಹೇಳಿದರು.

ಗದ್ದಲಕ್ಕೆ ಕಾರಣವಾದ ಆರೋಪ

ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ಸದಸ್ಯರು ನೀಡಿದ್ದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸುವ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದ ‘ಸರ್ಕಾರಿ ಪ್ರಾಯೋಜಿತ ಕೊಲೆ’ ಎಂಬ ವಾಕ್ಯ ವಿಧಾನಸಭೆಯಲ್ಲಿ ಕೆಲಕಾಲ ಗದ್ದಲಕ್ಕೆ ಕಾರಣವಾಯಿತು.

ವಿಷಯ ಪ್ರಸ್ತಾಪವಾದ ಬಳಿಕ ಈ ನೋಟಿಸ್‌ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ.
ಇಂತಹ ಪ್ರಕರಣಗಳಿಗೆ ಸರ್ಕಾರ ಮಾಡಿದ ಕೊಲೆ ಎನ್ನಬಹುದೆ’ ಎಂದು ಕೇಳಿದರು.

ಸಚಿವ ಬಿ. ಶ್ರೀರಾಮುಲು ಸೇರಿದಂತೆ ಬಿಜೆಪಿಯ ಹಲವರು ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಶಾಸಕರೂ ವಾಕ್ಸಮರಕ್ಕೆ ಇಳಿದರು. ಇದರಿಂದಾಗಿ ಸದನದಲ್ಲಿ ಯಾರು ಏನು ಹೇಳುತ್ತಿದ್ದಾರೆ ಎಂಬುದೇ ತಿಳಿಯದಂತಹ ಸ್ಥಿತಿ ನಿರ್ಮಾಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.