ADVERTISEMENT

ಕೃಷ್ಣಾ ಪ್ರವಾಹ ನಿರ್ವಹಣೆಗೆ ಸಮಿತಿ ರಚಿಸಲು ಒಪ್ಪಿಗೆ

ಸಚಿವ ರಮೇಶ ಜಾರಕಿಹೊಳಿ ನೇತೃತ್ವದ ನಿಯೋಗ ಮಹಾರಾಷ್ಟ್ರಕ್ಕೆ ಭೇಟಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 19:30 IST
Last Updated 8 ಜುಲೈ 2020, 19:30 IST
ಮಹಾರಾಷ್ಟ್ರದ ಮುಂಬೈನಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಸಚಿವ ಶ್ರೀಮಂತ ಪಾಟೀಲ ಹಾಗೂ  ಮಹಾರಾಷ್ಟ್ರದ ಸಚಿವ ಜಯಂತ್‌ ಪಾಟೀಲ ಭಾಗವಹಿಸಿದ್ದರು
ಮಹಾರಾಷ್ಟ್ರದ ಮುಂಬೈನಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಸಚಿವ ಶ್ರೀಮಂತ ಪಾಟೀಲ ಹಾಗೂ  ಮಹಾರಾಷ್ಟ್ರದ ಸಚಿವ ಜಯಂತ್‌ ಪಾಟೀಲ ಭಾಗವಹಿಸಿದ್ದರು   

ಬೆಳಗಾವಿ: ಕೃಷ್ಣಾ ನದಿ ಪ್ರವಾಹವನ್ನು ನಿರ್ವಹಣೆ ಮಾಡಲು ಮೂರು ಹಂತದಲ್ಲಿ ಸಮಿತಿ ರಚಿಸಲು ಮಹಾರಾಷ್ಟ್ರ ಹಾಗೂ ಕರ್ನಾಟಕ ಎರಡೂ ರಾಜ್ಯಗಳು ಬುಧವಾರ ಒಪ್ಪಿಕೊಂಡಿವೆ.

ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ರಾಜ್ಯ ನಿಯೋಗವು ಮಹಾರಾಷ್ಟ್ರದ ಜಲಸಂಪನ್ಮೂಲ ಇಲಾಖೆಯ ಸಚಿವರಾದ ಜಯಂತ್ ಪಾಟೀಲ್ ಅವರೊಂದಿಗೆ ಮುಂಬೈಯಲ್ಲಿ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

2006 ಹಾಗೂ ಕಳೆದ ವರ್ಷ ಕೃಷ್ಣಾ ನದಿ ತೀರದಲ್ಲಿ ಸಂಭವಿಸಿದ್ದ ಪ್ರವಾಹ ಪರಿಸ್ಥಿತಿ ಮತ್ತೆ ಮರುಕಳಿಸದಂತೆ ತಡೆಯಲು ಪ್ರವಾಹ ನಿರ್ವಹಣಾ ಸಮಿತಿ ರಚನೆಯಾಗಲಿದೆ. ಸ್ಥಳೀಯ, ಜಿಲ್ಲಾ ಮಟ್ಟ ಹಾಗೂ ಸರ್ಕಾರದ ಮಟ್ಟದಲ್ಲಿ ಮೂರು ಹಂತದಲ್ಲಿ ಜಂಟಿ ಸಮಿತಿ ಇರುತ್ತದೆ. ಜಲಾಶಯಗಳಲ್ಲಿ ಸಂಗ್ರಹವಾಗುತ್ತಿರುವ ನೀರಿನ ಪ್ರಮಾಣ ಹಾಗೂ ನೀರು ಹೊರಬಿಡುವ ಬಗ್ಗೆ ಸಮಿತಿಯು ನಿರ್ವಹಣೆ ಮಾಡಲಿದೆ.

ADVERTISEMENT

ನೀರು ವಿನಿಮಯಕ್ಕೆ ಮಹಾರಾಷ್ಟ್ರ ಮನವಿ

ಕೃಷ್ಣಾ ನದಿ ತೀರದ ಕರ್ನಾಟಕದ ಗ್ರಾಮಗಳಿಗೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹಣದ ಬದಲು ಪರಸ್ಪರ ನೀರು ವಿನಿಮಯ ಮಾಡಿಕೊಳ್ಳುವ ಅಗತ್ಯವಿದೆ ಎಂದು ಮಹಾರಾಷ್ಟ್ರ ಸರ್ಕಾರ ಪ್ರತಿಪಾದಿಸಿತು.

ಬೇಸಿಗೆ ಕಾಲದಲ್ಲಿ ಕರ್ನಾಟಕದಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಎದುರಾಗುತ್ತಿರುವುದರಿಂದ ನೀರು ವಿನಿಮಯದ ಬದಲಾಗಿ ಪರ್ಯಾಯ ಮಾರ್ಗಗಳ ಬಗ್ಗೆಯೂ ಅಧ್ಯಯನ ನಡೆಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ರಮೇಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ಆಲಮಟ್ಟಿ ಚರ್ಚೆ

ಆಲಮಟ್ಟಿ ಜಲಾಶಯದ ಎತ್ತರದ ಜತೆಗೆ ಕೃಷ್ಣಾ ನದಿ ನೀರು ಬಳಕೆಗೆ ಸಂಬಂಧಿಸಿದಂತೆ ನ್ಯಾಯಾಧೀಕರಣದ ತೀರ್ಪನ್ನು ಕೇಂದ್ರ ಸರ್ಕಾರ ಇದುವರೆಗೆ ಗೆಜೆಟ್‌ನಲ್ಲಿ ಪ್ರಕಟಿಸದಿರುವುದರಿಂದ ಸದ್ಯಕ್ಕೆ ನೀರು ಬಳಕೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ನ್ಯಾಯಾಧೀಕರಣದ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಉಭಯ ರಾಜ್ಯಗಳು ತೀರ್ಮಾನಿಸಿದವು.

ರಾಜ್ಯದ ನಿಯೋಗದಲ್ಲಿ ಜವಳಿ ಇಲಾಖೆಯ ಸಚಿವ ಶ್ರೀಮಂತ ಪಾಟೀಲ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಜಲಸಂಪನ್ಮೂಲ ಇಲಾಖೆಯ ಸಚಿವರ ವಿಶೇಷ ಕರ್ತವ್ಯಾಧಿಕಾರಿ ರುದ್ರಯ್ಯ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಲ್ಲಿಕಾರ್ಜುನ ಗುಂಗೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.