ADVERTISEMENT

ಚರಂಡಿ ಸ್ವಚ್ಛಗೊಳಿಸುತ್ತಿದ್ದ ಕಾರ್ಮಿಕರಿಬ್ಬರ ಸಾವು

ಬಸವನಕೋಟೆ ಗ್ರಾ.ಪಂ. ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 18:33 IST
Last Updated 20 ಮಾರ್ಚ್ 2023, 18:33 IST
   

ಜಗಳೂರು (ದಾವಣಗೆರೆ): ಗ್ರಾಮ ಪಂಚಾಯಿತಿಯ ದಿನಗೂಲಿ ಕಾರ್ಮಿಕರಿಬ್ಬರು ಚರಂಡಿ ಶುಚಿಗೊಳಿಸುವ ಸಂದರ್ಭ ಉಸಿರುಗಟ್ಟಿ ಮೃತಪಟ್ಟ ಘಟನೆ ತಾಲ್ಲೂಕಿನ ಬಸವನಕೋಟೆ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಗ್ರಾಮ ಪಂಚಾಯಿತಿಯ ಸ್ವಚ್ಛತಾ ಕಾರ್ಮಿಕರಾದ ಡಿ.ಸತ್ಯಪ್ಪ (45) ಹಾಗೂ ಎನ್.ಮೈಲಪ್ಪ (42) ಮೃತರು.

ಚರಂಡಿಯಲ್ಲಿ ತ್ಯಾಜ್ಯ ಕಟ್ಟಿಕೊಂಡಿತ್ತು. ಸ್ವಚ್ಛತೆಗೆ ಇಳಿದಿದ್ದ ಈ ಇಬ್ಬರೂ ಕಾರ್ಮಿಕರು ವಿಷಗಾಳಿ ಸೇವಿಸಿ ಅಸ್ವಸ್ಥರಾಗಿದ್ದರು. ಅವರಿಗೆ ಚಿಕಿತ್ಸೆ ಕೊಡಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಈ ಕುರಿತು ಇನ್ನೂ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ನಿರ್ಲಕ್ಷ್ಯದಿಂದ ಸಾವು: ‘ಸುರಕ್ಷತೆ ಕ್ರಮವಿಲ್ಲದೆ ಕೈಗವಸು ಮತ್ತು ಮುಖಗವಸು ನೀಡದೆ ಏಕಾಏಕಿ ಚರಂಡಿಗೆ ಇಳಿಸಲಾಗಿದೆ. ಪಿಡಿಒ ನಿರ್ಲಕ್ಷ್ಯದಿಂದ ಇಬ್ಬರ ಸಾವು ಸಂಭವಿಸಿದೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

‘ಪಿಡಿಒ ಮತ್ತು ಅಧ್ಯಕ್ಷರ ಸೂಚನೆ ಮೇರೆಗೆ ಚರಂಡಿಗಳ ಸ್ವಚ್ಛತೆಗೆ ದಿನಗೂಲಿ ನೌಕರರನ್ನು ನೇಮಿಸಲಾಗಿತ್ತು. ಮರಣೋತ್ತರ ಪರೀಕ್ಷೆ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ’ ಎಂದು ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.